ಈ ಸಲ ಏಷ್ಯನ್​ ಗೇಮ್ಸ್​ ಆರಂಭೋತ್ಸವದಲ್ಲಿ ಪಟಾಕಿ ಸಿಡಿಸಲ್ಲ! ಚೀನಾ ನೀಡಿದ ಕಾರಣ ಹೀಗಿದೆ…

asian games open web
Published on

ಹಾಂಗ್​ಝೌ: ಜಾಗತಿಕ-ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳೆಂದರೆ ಅದ್ದೂರಿ ಉದ್ಘಾಟನಾ ಸಮಾರಂಭಗಳು ಇದ್ದೇ ಇರುತ್ತವೆ. ಅದರೊಂದಿಗೆ ಆಕರ್ಷಕ ಸುಡುಮದ್ದು ಪ್ರದರ್ಶನಗಳು ಈ ಸಮಾರಂಭದ ಪ್ರಮುಖ ಭಾಗವಾಗಿರುತ್ತವೆ. ಆದರೆ ಮುಂದಿನ ಶನಿವಾರ ನಡೆಯಲಿರುವ 19ನೇ ಆವೃತ್ತಿಯ ಏಷ್ಯನ್​ ಗೇಮ್ಸ್​ನ ಉದ್ಘಾಟನಾ ಸಮಾರಂಭದಲ್ಲಿ ಸುಡುಮದ್ದು ಪ್ರದರ್ಶನ ಇರುವುದಿಲ್ಲ ಎಂದು ಆತಿಥೇಯ ಚೀನಾ ಘೋಷಿಸಿದೆ. ಪರಿಸರ ಸಂರಕ್ಷಣೆಯ ಧ್ಯೇಯದೊಂದಿಗೆ ಚೀನಾ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಆರಂಭೋತ್ಸವಗಳಲ್ಲಿ ಸುಡುಮದ್ದು ಪ್ರದರ್ಶಿಸುವ ಸಂಪ್ರದಾಯವನ್ನು ನಾವು ಮುರಿಯಲಿದ್ದೇವೆ. ಕ್ರೀಡಾಕೂಟವನ್ನು ಪರಿಸರದ ಮೇಲಿನ ಕಾಳಜಿಯೊಂದಿಗೆ ಆಯೋಜಿಸುವ ನಮ್ಮ ಧ್ಯೇಯಕ್ಕೆ ಬದ್ಧವಾಗಿರಲಿದ್ದೇವೆ. ಇಂಗಾಲದ ಹೊರಸೂಸುವಿಕೆಯನ್ನು ಸಾಧ್ಯವಾದಷ್ಟರ ಮಟ್ಟಿಗೆ ತಡೆಯುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಸುಡುಮದ್ದು ಪ್ರದರ್ಶನವನ್ನು ಕೈಬಿಡುತ್ತಿದ್ದೇವೆ ಎಂದು ಉದ್ಘಾಟನಾ ಸಮಾರಂಭದ ಪ್ರಧಾನ ನಿರ್ದೇಶಕ ಶಾ ಕ್ಸಿಯೋಲನ್​ ತಿಳಿಸಿದ್ದಾರೆ.

ವಿಶ್ವ ಬ್ಯಾಂಕ್​ ವರದಿಯ ಪ್ರಕಾರ, ಜಾಗತಿಕವಾಗಿ ಹೊರಸೂಸಲ್ಪಡುವ ಇಂಗಾಲದ ಡೈಆಕ್ಸೈಡ್​ನಲ್ಲಿ ಶೇ. 27 ಮತ್ತು ಹಸಿರು ಮನೆ ಅನಿಲಗಳ ಮೂರನೇ ಒಂದು ಭಾಗ ಚೀನಾದ್ದಾಗಿದೆ. 2060ರ ವೇಳೆಗೆ ಶೂನ್ಯ ಹೊರಸೂಸುವಿಕೆಯನ್ನು ತಲುಪುವ ಗುರಿ ಇಟ್ಟುಕೊಂಡಿರುವ ಚೀನಾ, ವಿದ್ಯುತ್​ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಹಸಿರು ಮೂಲಸೌಕರ್ಯ ಮತ್ತು ತಂತ್ರಜ್ಞಾನಕ್ಕಾಗಿ 1,164ರಿಂದ 1,414 ಲಕ್ಷ ಕೋಟಿ ರೂ. ಹೂಡಿಕೆ ಯೋಜಿಸಿದೆ.

ಏಷ್ಯಾಡ್​ ಉದ್ಘಾಟನಾ ಸಮಾರಂಭದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ದೃಶ್ಯ ಪರಿಣಾಮಗಳ ಮೂಲಕ "ಜನರು, ಸೌಂದರ್ಯ ಮತ್ತು ಭಾವನೆಗಳ' ಧ್ಯೇಯವನ್ನು ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ. ಪರಿಸರ ಸಂರಕ್ಷಣೆಯ ನಮ್ಮ ತತ್ವವನ್ನು ಹರಡುವುದು ಕೂಡ ನಮ್ಮ ಉದ್ದೇಶವಾಗಿದೆ ಎಂದು ಕ್ಸಿಯೋಲನ್​ ತಿಳಿಸಿದ್ದಾರೆ.

ಪರಿಸರಸ್ನೇಹಿ ಏಷ್ಯಾಡ್​ ಕ್ರೀಡಾಗ್ರಾಮ

ಈಗಾಗಲೆ ಅನಾವರಣಗೊಂಡಿರುವ ಏಷ್ಯನ್​ ಗೇಮ್ಸ್​ನ ಕ್ರೀಡಾಗ್ರಾಮವನ್ನೂ ಪರಿಸರ ಸ್ನೇಹಿಯಾಗಿ ರೂಪಿಸಲಾಗಿದೆ. 45 ದೇಶಗಳ 12 ಸಾವಿರ ಕ್ರೀಡಾಪಟುಗಳ ಸಹಿತ ಒಟ್ಟಾರೆ 20 ಸಾವಿರ ಮಂದಿಗೆ ವಸತಿ ವ್ಯವಸ್ಥೆ ಹೊಂದಿರುವ ಕ್ರೀಡಾಗ್ರಾಮದಲ್ಲಿ ಅತ್ಯಂತ ಆಧುನಿಕ ತಂತ್ರಜ್ಞಾನಗಳ ವ್ಯವಸ್ಥೆ ಮಾಡಲಾಗಿದೆ. "ಝೀರೋ ವೇಸ್ಟ್​ ಏಷ್ಯನ್​ ಗೇಮ್ಸ್​' ಧ್ಯೇಯದೊಂದಿಗೆ ಚೀನಾ, ಕ್ರೀಡಾಕೂಟವನ್ನು ಆಯೋಜಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net