

ವಾಷಿಂಗ್ಟನ್ ಡಿಸಿ: ಜಾಗತಿಕ ಮಟ್ಟದಲ್ಲಿ ಅಮೆರಿಕದ(America) ಹಿತಾಸಕ್ತಿಗಳಿಗೆ ಯಾವ ದೇಶವು ದೊಡ್ಡ ಬೆದರಿಕೆಯನ್ನು ಒಡ್ಡುತ್ತದೆ? ನಮ್ಮೆಲ್ಲರಿಗೂ ಥಟ್ ಎಂದು ರಷ್ಯಾ ನೆನಪಿಗೆ ಬರಬಹುದು, ಆದರೆ ಅಮೆರಿಕದ ಗುಪ್ತಚರ ಸಂಸ್ಥೆಗಳು ಹಾಗೆ ನಂಬುವುದಿಲ್ಲ. ಮಾರ್ಚ್ 25ರ ಮಂಗಳವಾರ ಬಿಡುಗಡೆಯಾದ ಅಮೆರಿಕ ಗುಪ್ತಚರ ವರದಿಯ ಪ್ರಕಾರ, ಅಮೆರಿಕಕ್ಕೆ ಅತಿದೊಡ್ಡ ಬೆದರಿಕೆ ಚೀನಾದಿಂದ ಬಂದಿದೆ. ಬೀಜಿಂಗ್ ತನ್ನ ಮಿಲಿಟರಿ ಮತ್ತು ಸೈಬರ್ ಸಾಮರ್ಥ್ಯಗಳನ್ನು ವೇಗವಾಗಿ ಅಭಿವೃದ್ಧಿಪಡಿಸುತ್ತಿದೆ ಮತ್ತು ಅಮೆರಿಕಕ್ಕೆ ಸವಾಲಾಗಿ ಪರಿಣಮಿಸಿದೆ ಎಂದು ವರದಿ ಹೇಳಿದೆ.
ಅಮೆರಿಕದ ಎಲ್ಲಾ ಗುಪ್ತಚರ ಸಂಸ್ಥೆಗಳು ಒಟ್ಟಾಗಿ ವರ್ಷಕ್ಕೊಮ್ಮೆ ವಾರ್ಷಿಕ ಬೆದರಿಕೆ ಮೌಲ್ಯಮಾಪನ ವರದಿಯನ್ನು ಬಿಡುಗಡೆ ಮಾಡುತ್ತವೆ. ತೈವಾನ್ ವಿರುದ್ಧ ಬೀಜಿಂಗ್‌ನ ಬಲವಂತದ ಒತ್ತಡ ಮತ್ತು ಅಮೆರಿಕದ ಗುರಿಗಳ ವಿರುದ್ಧ ವ್ಯಾಪಕವಾದ ಸೈಬರ್ ಕಾರ್ಯಾಚರಣೆಗಳು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಹೆಚ್ಚುತ್ತಿರುವ ಬೆದರಿಕೆಯ ಸೂಚಕಗಳಾಗಿವೆ ಎಂದು ವರದಿ ಹೇಳಿದೆ.
ಇತರ ದೇಶಗಳು ಮತ್ತು ಕ್ರಿಮಿನಲ್ ಸಂಘಟನೆಗಳಿಂದ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಎದುರಾಗಿರುವ ಭದ್ರತಾ ಬೆದರಿಕೆಗಳ ಕುರಿತು ಅಮೆರಿಕದ ಗುಪ್ತಚರ ಸಂಸ್ಥೆಗಳ ಸಾಮೂಹಿಕ ಒಳನೋಟಗಳನ್ನು ಈ ವರದಿಯು ಪ್ರತಿಬಿಂಬಿಸುತ್ತದೆ. ಅಂದರೆ ಅವರು ಒಟ್ಟಾಗಿ ಏನು ಯೋಚಿಸುತ್ತಾರೆ ಎಂಬುದರ ಕುರಿತು ಅದು ಮಾಹಿತಿಯನ್ನು ನೀಡುತ್ತದೆ.
ಚೀನಾ, ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅತ್ಯಂತ ವ್ಯಾಪಕ ಮತ್ತು ಬಲವಾದ ಮಿಲಿಟರಿ ಬೆದರಿಕೆಯನ್ನು ಒಡ್ಡುತ್ತಿದೆ ಎಂದು ವರದಿ ಹೇಳಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಅತಿಯಾದ ಆಕ್ರಮಣಕಾರಿ ಮತ್ತು ವಿಚ್ಛಿದ್ರಕಾರಕ ಎಂದು ಕಾಣಿಸಿಕೊಳ್ಳುವ ಬಗ್ಗೆ ಚೀನಾ ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾಗಳಿಗಿಂತ ಹೆಚ್ಚು ಜಾಗರೂಕವಾಗಿದೆ ಎಂದು ಅದು ಹೇಳಿದೆ.
ಮಾರ್ಚ್ 26ರ ಮಂಗಳವಾರ ಸೆನೆಟ್ ವಿಚಾರಣೆಯಲ್ಲಿ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್, ಪ್ರಸ್ತುತ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಚೀನಾ ನಮ್ಮ ಅತ್ಯಂತ ಸಮರ್ಥ ಕಾರ್ಯತಂತ್ರದ ಪ್ರತಿಸ್ಪರ್ಧಿ ಎಂದು ಹೇಳಿದರು. ಚೀನಾದ ಸೇನೆಯು ಹೈಪರ್‌ಸಾನಿಕ್ ಶಸ್ತ್ರಾಸ್ತ್ರಗಳು, ಸ್ಟೆಲ್ತ್ ವಿಮಾನಗಳು, ಸುಧಾರಿತ ಜಲಾಂತರ್ಗಾಮಿ ನೌಕೆಗಳು, ಬಲಿಷ್ಠ ಬಾಹ್ಯಾಕಾಶ ಮತ್ತು ಸೈಬರ್ ಯುದ್ಧ ಸ್ವತ್ತುಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ದೊಡ್ಡ ಶಸ್ತ್ರಾಗಾರ ಸೇರಿದಂತೆ ಸುಧಾರಿತ ಸಾಮರ್ಥ್ಯಗಳನ್ನು ನಿಯೋಜಿಸುತ್ತಿದೆ ಎಂದು ವಿವರಿಸಿದರು.
ಚೀನಾವನ್ನು ವಿಶ್ವಾದ್ಯಂತ ಅಮೆರಿಕದ ಹಿತಾಸಕ್ತಿಗಳಿಗೆ ಬೆದರಿಕೆ ಹಾಕುವ ಅತ್ಯಂತ ಸಾಮರ್ಥ್ಯವಿರುವ ರಾಷ್ಟ್ರವೆಂದು ಎತ್ತಿ ತೋರಿಸಲಾಗಿದೆ. ಆದರೂ ಅದು ತನ್ನ ಆರ್ಥಿಕ ಮತ್ತು ರಾಜತಾಂತ್ರಿಕ ಖ್ಯಾತಿಗೆ ಧಕ್ಕೆ ತರುವ ಬಗ್ಗೆ ಎಚ್ಚರಿಕೆಯಿಂದಿದೆ ಎಂದು ತೈಪೆ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.(ಏಜೆನ್ಸೀಸ್)