

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಗತ್ತಿನಲ್ಲಿ ಮೊಟ್ಟ ಮೊದಲು ಹುಟ್ಟಿದ ಸಾಹಿತ್ಯವೇ ಮಕ್ಕಳ ಸಾಹಿತ್ಯ. ತಾಯಿಯ ಲಾಲಿಯಿಂದ ಆರಂಭವಾಗಿ ಇಂದು ದೊಡ್ಡ ಸಾಹಿತ್ಯವಾಗಿ ಬೆಳೆಯಲು ಸಹಕಾರಿಯಾಗಿದೆ ಎಂದು ಡಾ.ಎಂ.ಎಂ.ಕಲಬುರ್ಗಿ ಟ್ರಸ್ಟ್ ಅಧ್ಯಕ್ಷ ಡಾ.ವೀರಣ್ಣ ರಾಜೂರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮುಂಡರಗಿ ಕಲಾ ಶಿಕ್ಷಣ ಮತ್ತು ಸಂಸ್ಕೃತಿ ಪ್ರತಿಷ್ಠಾನ, ಧಾರವಾಡದ ಚಿಲಿಪಿಲಿ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಶಿಕ್ಷಕಿ ದಿ. ಕಲಾವತಿ ಸೊಲಗಿ ಸ್ಮರಣೆಯಲ್ಲಿ 2022ರ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳ ಸಾಹಿತ್ಯ ಮನಸ್ಸಿನಲ್ಲಿ ಕೊನೆಯವರೆಗೂ ಉಳಿಯುತ್ತದೆ ಎನ್ನುವುದಕ್ಕೆ ಇಂದಿಗೂ ಬಾಲ್ಯದ ಹಾಡು-ಕಥೆಗಳನ್ನು ನೆನಪಿನಲ್ಲಿ ಇಟ್ಟು ಕೊಂಡಿದ್ದೇ ಸಾಕ್ಷಿ. ಮಕ್ಕಳ ಸಾಹಿತ್ಯ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ಪ್ರಚಲಿತತೆ ಮಕ್ಕಳ ಸಾಹಿತ್ಯದಲ್ಲಿ ಬೆಳೆಯಬೇಕಿದೆ. ಮಕ್ಕಳಿಗೆ ಕಥೆ ಹೇಳುವ ಅಜ್ಜ-ಅಜ್ಜಿಗಳು ಈಗಿಲ್ಲ. ನಮ್ಮ ಕುಂಟುಂಬ ವ್ಯವಸ್ಥೆ ಬದಲಾಗಿದ್ದೇ ಇದಕ್ಕೆ ಕಾರಣ. ಮಕ್ಕಳ ಸಾಹಿತ್ಯ ಪ್ರಕಾರ ಮಕ್ಕಳ ಮನೋವಿಕಾಸಕ್ಕೆ ಬಳಕೆಯಾಗುವಂತೆ ಮಕ್ಕಳ ಸಾಹಿತಿಗಳು ತುಸು ಹೆಚ್ಚು ಗಮನಿಸಬೇಕು ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಡಾ. ನಿಂಗು ಸೊಲಗಿ ಮಾತನಾಡಿ, ಶಿಕ್ಷಣ ಪ್ರತಿಯೊಬ್ಬರ ಬದುಕಿನಲ್ಲೂ ಮಹತ್ತರ ಬದಲಾವಣೆ ತರುತ್ತದೆ. ಗುಬ್ಬಚ್ಚಿಗೂಡು ಪತ್ರಿಕೆ 25 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಅರ್ಥಪೂರ್ಣ ಅಖಿಲ ಭಾರತ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸೋಣ ಎಂದರು.
ಡಾ.ಆನಂದ ಪಾಂಡುರಂಗಿ ಮಾತನಾಡಿದರು. ಹಿರಿಯ ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಸಾಹಿತಿ ಮತ್ತೂರು ಸುಬ್ಬಣ್ಣ ಹಾಗೂ ಧಾರವಾಡ ಆಕಾಶವಾಣಿ ಮುಖ್ಯಸ್ಥ ಡಾ. ಬಸು ಬೇವಿನಗಿಡದ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ. ನಿಂಗಣ್ಣ ಕುಂಠಿ, ಶಶಿಧರ ತೋಡಕರ, ಮಲ್ಲಿಕಾರ್ಜುನ ಚಿಕ್ಕಮಠ, ಕೆ.ಎಚ್.ನಾಯಕ, ಪಿ.ಮಾರುತಿ, ಆನಂದ ಪಾಟೀಲ, ಶರಣಬಸವ ಚೋಳಿನ, ಪ್ರಕಾಶ ಬಾಳಿಕಾಯಿ, ರಾಮು ಮೂಲಗಿ, ಶರಣು ಸೊಲಗಿ, ಶಿವಕುಮಾರ ಕುಷ್ಟಗಿ, ಚೇತನ ಸೊಲಗಿ, ಇತರರು ಇದ್ದರು.
ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ವಿಶ್ವಾಸ ಸೊಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.