

ಉಡುಪಿ : ಮಕ್ಕಳ ಮನಸ್ಸು ಬಹಳಷ್ಟು ಸೂಕ್ಷ$್ಮವಾಗಿದ್ದು, ಮದ್ಯವ್ಯಸನಗಳಿಂದ ಉಂಟಾಗುವ ಕೌಟುಂಬಿಕ ಹಿಂಸೆ ಮಕ್ಕಳ ಮನಸ್ಸಿನಲ್ಲಿ ಶಾಶ್ವತ ಖಿನ್ನತೆಗೆ ಕಾರಣವಾಗುತ್ತದೆ. ಆತಂಕ ಮನೆ ಮಾಡುತ್ತದೆ ಎಂದು ಮೈಸೂರಿನ ದೀನಬಂಧು ಮಕ್ಕಳ ಮನೆ ಸಂಸ್ಥಾಪಕ ಹಾಗೂ ಹಿರಿಯ ಸಾಹಿತಿ ಜಿ.ಎಸ್. ಶಿವರುದ್ರಪ್ಪ ಪುತ್ರ ಪ್ರೊ. ಜಯದೇವ್ ಜಿ. ಎಸ್. ಹೇಳಿದರು.
ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ಗುರುವಾರ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಕಮಲ್ ಎ. ಬಾಳಿಗಾ ಚಾರಿಟೆಬಲ್ ಟ್ರಸ್ಟ್ ಮುಂಬಯಿ, ಒನ್ ಗುಡ್ ಸ್ಟೆಪ್ ಬೆಂಗಳೂರು, ರೋಟರಿ ಕ್ಲಬ್ ಮಣಿಪಾಲ, ಯಕ್ಷಗಾನ ಕಲಾ ರಂಗ ಆಶ್ರಯದಲ್ಲಿ ಮದ್ಯವ್ಯಸನಿ ಪಾಲಕರ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಅತೀ ಹಿಂಸೆಯನ್ನು ನೋಡಿರುವ ಮಗುವಿನ ಮೆದುಳಿನ ರಚನೆಯೇ ಬದಲಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಮಕ್ಕಳ ಮಿದುಳಿನ ಬೆಳವಣಿಗೆಯೂ ಕುಗ್ಗುತ್ತದೆ. ಹೀಗಾಗಿ ಸರಳ ಜೀವನ ಅಳವಡಿಸಿಕೊಂಡರೆ ವ್ಯಸನಕ್ಕೆ ಜಾಗವಿರುವುದಿಲ್ಲ ಎಂದರು.
ಸರ್ಕಾರದ ಮದ್ಯನಿತಿ ಬದಲಾಗಬೇಕು
ಚಾಮರಾಜನಗರದ ಆದಿವಾಸಿ ತಾಂಡಾಗಳಲ್ಲಿ ಕುಡಿತದ ಚಟದಿಂದ ಶೇ.50ರಷ್ಟು ಮನೆಗಳಲ್ಲಿ ಗಂಡಸರೇ ಇಲ್ಲವಾಗಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕು. ಸರ್ಕಾರವೂ ಹೆಂಡದ ದುಡ್ಡಿನಲ್ಲಿ ಜನರಿಗೆ ಉಚಿತ ಸೌಲಭ್ಯಗಳನ್ನು ನೀಡುವುದು ಸರಿಯಲ್ಲ. ಇದರಿಂದ ಜನರ ಜೀವನ ಕುಗ್ಗಿಹೋಗುತ್ತದೆ. ದೇಶದ 2&3 ರಾಜ್ಯಗಳಲ್ಲಿ ಮದ್ಯವನ್ನು ಸಂಪೂರ್ಣ ನಿಷೇಧಿಸಿದ್ದಾರೆ. ಹೀಗಾಘಿ ರಾಜ್ಯ ಸರ್ಕಾರ ಅಬಕಾರಿ ಆದಾಯ ಅವಲಂಬಿಸಬಾರದು. ಮದ್ಯನಿತಿ ಬದಲಾಯಿಸಬೇಕು. ಎಂದು ಆಗ್ರಹಿಸಿದರು.
ಡಾ. ಎ.ವಿ. ಬಾಳಿಗಾ ಸಮೂಹ ಸಂಸ್ಥೆ ನಿರ್ದೇಶಕ ಡಾ. ಪಿ.ವಿ.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾರತೀಯ ಮಕ್ಕಳ ವೈದ್ಯರ ಸಂಘ ಉಪಾಧ್ಯಕ್ಷೆ ಡಾ. ಪ್ರೀತಿ ಗಲಗಲಿ , ರೋಟರಿ ಜಿಲ್ಲಾ ಗವರ್ನರ್ ದೇವಾನಂದ್ , ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಳಿ ಕಡೆಕಾರ್ , ಒನ್ ಗುಡ್ ಸ್ಟೆಪ್, ಬೆಂಗಳೂರು ಸಂಸ್ಥಾಪಕಿ ಅಮಿತಾ ಪೈ, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ. ಗಿರಿಜಾ ರಾವ್ ಉಪಸ್ಥಿತರಿದ್ದರು.
ಮಕ್ಕಳು ಹಿರಿಯ ವರ್ತನೆ ಅನುಸರಿಸುತ್ತಾರೆ. ಹೀಗಾಗಿ ತಂದೆ&ತಾಯಿ ಚಟಗಳಿಂದ ದೂರವಿರಬೇಕು. ಪ್ರತಿಯೊಬ್ಬ ಮನುಷ್ಯನ ಭಾವನೆಗೆ ಹೊಡೆದ ಬಿದ್ದಾಗ ಮಾತ್ರ ಚಟಗಳನ್ನು ಬಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚಿರುವುದರಿಂದ ಸರ್ಕಾರಿ ಹಾಸ್ಟೆಲ್ಗಳಲ್ಲಿ ಪ್ರತಿ 6 ತಿಂಗಳಿಗೊಮ್ಮೆ ಮಕ್ಕಳ ಕೌನ್ಸಿಲಿಂಗ್ ನಡೆಸುವುದನ್ನು ಕಡ್ಡಾಯ ಮಾಡಬೇಕು. ಈ ಬಗ್ಗೆ ಸರ್ಕಾರವನ್ನು ಆಗ್ರಹಿಸಲಾಗಿದೆ. -ಡಾ. ಧನಂಜಯ ಸರ್ಜಿ, ವಿಪ ಸದಸ್ಯ