ಮಕ್ಕಳು ಸೇರಿ 11 ಸಾವು, ಈ ನಷ್ಟ ಭರಿಸಲು ಯಾರಿಂದಲೂ ಸಾಧ್ಯವಿಲ್ಲ: ಕ್ಯಾಮೆರಾ ಮುಂದೆ ಡಿಕೆಶಿ ಕಣ್ಣೀರು! DK Shivakumar

DK Shivakumar
Published on

DK Shivakumar : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ (ಜೂನ್​ 04) ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿಯಲ್ಲಿ ಮಕ್ಕಳು ಕೂಡ ಇದಾರೆ. ಈ ಸಾವನ್ನು ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಧ್ಯಮಗಳ ಮುಂದೆ ಕಣ್ಣೀರಾಕಿದರು.

ಬೆಂಗಳೂರಿನಲ್ಲಿಂದು ಕಾಲ್ತುಳಿತ ಪ್ರಕರಣದ ಬಗ್ಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಡಿಸಿಎಂ ಡಿಕೆ ಶಿವಕುಮಾರ್ ಕ್ಯಾಮೆರಾ ಮುಂದೆ ದುಃಖಿತರಾದರು. ನಾನು ಮಕ್ಕಳ ಬಗ್ಗೆ ಚಿಂತಿತನಾಗಿದ್ದೇನೆ. ಆ ಚಿಕ್ಕ ಮಕ್ಕಳ ಬಗ್ಗೆ, ಅವರೆಲ್ಲ 15 ವರ್ಷ ವಯಸ್ಸಿನವರು. ಕನಿಷ್ಠ 10 ಜನರು ಸಾವಿಗೀಡಾಗಿರುವುದನ್ನು ನನ್ನ ಕಣ್ಣಾರೆ ನೋಡಿದ್ದೇನೆ. ಯಾವುದೇ ಕುಟುಂಬವು ಈ ನಷ್ಟವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಪರಿಸ್ಥಿತಿ ಎಷ್ಟು ಬೇಗನೆ ಹದಗೆಟ್ಟಿತು ಮತ್ತು ಸ್ಥಳದಲ್ಲಿದ್ದ ಅಧಿಕಾರಿಗಳು ತಮಗೆ ತುರ್ತು ಮಾಹಿತಿಯನ್ನು ನೀಡಿದ್ದನ್ನು ಡಿಕೆಶಿ ವಿವರಿಸಿದರು. 1 ರಿಂದ 2 ಜೀವಗಳು ಬಲಿಯಾಗಿವೆ, ಕಾರ್ಯಕ್ರಮವನ್ನು ತ್ವರಿತಗೊಳಿಸಿ, 10 ನಿಮಿಷಗಳಲ್ಲಿ ಕಾರ್ಯಕ್ರಮವನ್ನು ಮುಗಿಸಿ ಎಂದು ಪೊಲೀಸ್​ ಆಯುಕ್ತರು ನನಗೆ ಹೇಳಿದರು. ಹೀಗಾಗಿ ನಾವು ಕಾರ್ಯಕ್ರಮವನ್ನು ತರಾತುರಿಯಲ್ಲಿ ಮುಗಿಸಿದೆವು ಎಂದರು.

ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾವು ಆಡಳಿತಾತ್ಮಕ ಪಾಠ ಕಲಿಯಬೇಕಿದೆ. ಪ್ರತಿಪಕ್ಷಗಳು ಮೃತ ದೇಹಗಳ ಮೇಲೆ ರಾಜಕೀಯ ಮಾಡಲಿ. ಅವರು ಎಷ್ಟು ಮೃತದೇಹಗಳ ಮೇಲೆ ರಾಜಕೀಯ ಮಾಡಿದ್ದಾರೆಂದು ನಾನು ಪಟ್ಟಿ ಮಾಡುತ್ತೇನೆ. ಆದರೆ, ಚಿಕ್ಕ ಮಕ್ಕಳನ್ನು ನೋಡುವುದು ನೋವುಂಟುಮಾಡುತ್ತದೆ. ನಾನು ಅವರ ನೋವನ್ನು ನೋಡಿದ್ದೇನೆ ಎಂದರು.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ ಹನ್ನೊಂದು ಜನರು ಸಾವಿಗೀಡಾಗಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಬೆಳಗ್ಗೆ ಕ್ಷಮೆಯಾಚಿಸಿದರು. ಇಲ್ಲ, ನಾನು ಏನನ್ನೂ ವಿವರಿಸಲು ಬಯಸುವುದಿಲ್ಲ. ಆದರೆ, ಘಟನೆಯ ಬಗ್ಗೆ ನಮಗೆ ತುಂಬಾ ವಿಷಾದವಿದೆ. ಭವಿಷ್ಯದಲ್ಲಿ ಉತ್ತಮ ಪರಿಹಾರಕ್ಕಾಗಿ ನಾವೆಲ್ಲರೂ ಕೆಲಸ ಮಾಡುತ್ತೇವೆ ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದೇನು?

ಮಂಗಳವಾರ (ಜೂನ್​ 03) ಫೈನಲ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡವನ್ನು ಮಣಿಸಿ, ಬುಧವಾರ (ಜೂನ್​ 04) ಅಹಮದಾಬಾದ್‌ನಿಂದ ತಮ್ಮ ತವರು ಮೈದಾನಕ್ಕೆ ಆರ್​ಸಿಬಿ ತಂಡ ಹಿಂತಿರುಗಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಯಲಿದೆ ಎಂಬ ಸುದ್ದಿ ಕೇಳಿ ಲಕ್ಷಾಂತರ ಅಭಿಮಾನಿಗಳು ಸ್ಟೇಡಿಯಂಗೆ ಜಮಾಯಿಸಿದರು. ಇತ್ತ ಸರ್ಕಾರದಿಂದ ವಿಧಾನಸೌಧದ ಮೆಟ್ಟಿಲುಗಳಲ್ಲಿ ಆರ್​ಸಿಬಿ ತಂಡ ಸನ್ಮಾನ ಸ್ವೀಕರಿಸಿದರೆ, ಅತ್ತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಘೋರ ದುರಂತ ಸಂಭವಿಸಿತು. ಒಂದೇ ಕಡೆ ಲಕ್ಷಾಂತರ ಮಂದಿ ಜಮಾಯಿಸಿದ್ದರು. ಅಲ್ಲದೆ, ಯಾವುದೇ ಪೂರ್ವ ಸಿದ್ಧತೆ ಇರಲಿಲ್ಲ. ಸ್ಥಳದಲ್ಲಿ ಮೆಡಿಕಲ್​ ವ್ಯವಸ್ಥೆಯು ಇರಲಿಲ್ಲ. ಸುಮಾರು 1 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಜಮಾಯಿಸಿದ್ದರು ಎನ್ನಲಾಗಿದೆ. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಲ್ಲದೆ, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಐಪಿಎಲ್​ ಇತಿಹಾಸದಲ್ಲೇ ಇದೊಂದು ಕರಾಳ ಘಟನೆಯಾಗಿದೆ. ಐಪಿಎಲ್​ಗೆ ಇದೊಂದು ಕಪ್ಪು ಚುಕ್ಕಿ ಎಂದರೆ ತಪ್ಪಾಗಲಾರದು. ಈ ಘಟನೆಯ ಬಗ್ಗೆ ಕೇಳಿ ಸಚಿನ್​, ಅನೀಲ್​ ಕುಂಬ್ಳೆ ಸೇರಿದಂತೆ ಅನೇಕ ದಿಗ್ಗಜರು ಕೂಡ ದುಃಖ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net