ಕಿರುಕುಳ ಎನ್ನಿಸಿದಾಗ ರಕ್ಷಣೆ ಪಡೆದುಕೊಳ್ಳಿ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಮಂಜುಳಾ ಇಟ್ಟಿ ಸಲಹೆ

Child Marriage Prohibition Act Workshop Mandya
Published on

ಮಂಡ್ಯ: ಮಕ್ಕಳು, ತಮ್ಮ ಮೇಲೆ ಲೈಂಗಿಕ ಕಿರುಕುಳವಾಗುತ್ತಿದೆ ಎನ್ನಿಸಿದಾಗ ಅದನ್ನು ವಿರೋಧಿಸಬೇಕು. ಜತೆಗೆ ಶಿಕ್ಷಕರು ಹಾಗೂ ಪಾಲಕರಿಗೆ ತಿಳಿಸಿ ರಕ್ಷಣೆ ಪಡೆದುಕೊಳ್ಳಬೇಕು. ವಿಷಯ ತಿಳಿಸಲು ಹೆದರಿ ನೋವನ್ನು ಅನುಭವಿಸುತ್ತಾ ಆತ್ಮಹತ್ಯೆಯಂತಹ ದಾರಿ ತುಳಿಯಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಮಂಜುಳಾ ಇಟ್ಟಿ ಸಲಹೆ ನೀಡಿದರು.

ನಗರದ ಪಿಇಎಸ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ(ಪೋಕ್ಸೋ) ಕಾಯ್ದೆ 2012 ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯವಿವಾಹ ನಿಷೇಧ ಕಾಯ್ದೆ ಉಲ್ಲಂಘಿಸಿದವರಿಗೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚು. ಇದರಿಂದ ಮಕ್ಕಳ ಹಕ್ಕುಗಳ ರಕ್ಷಣೆಗೆ ಮಹತ್ವ ಹೆಚ್ಚಿದೆ ಎಂದರು.

ಪೋಕ್ಸೋ ಕಾಯ್ದೆಯ ತಿಳವಳಿಕೆಯಿಲ್ಲದೆ 16 ರಿಂದ 20 ವರ್ಷದೊಳಗಿನವರು ದೌರ್ಜನ್ಯಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಮಕ್ಕಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ(ಪೋಕ್ಸೋ) ಕಾಯ್ದೆ-2012ರ ಅರಿವು ಅವಶ್ಯಕ. ಲೈಂಗಿಕ ಅಪರಾಧದಲ್ಲಿ ಹೆಣ್ಣು ಮಕ್ಕಳು ಮಾತ್ರವಲ್ಲ, ಗಂಡು ಮಕ್ಕಳು ಸಹ ಬಲಿಪಶುಯಾಗಿರುವ ಪ್ರಕರಣಗಳು ಇವೆ. ಆದರಿಂದ ಈ ಕಾಯ್ದೆಯ ಬಗ್ಗೆ ಗಂಡು ಮತ್ತು ಹೆಣ್ಣು ಎಂಬ ಬೇಧವಿಲ್ಲದೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಲೈಂಗಿಕ ಕಿರುಕುಳ ಹಾಗೂ ಅತ್ಯ್ಯಾಚಾರ ಎರಡು ಬೇರೆ ಎರಡಕ್ಕೂ ಸಹ ವ್ಯತ್ಯಾಸ ಇದೆ. ಕಾಯ್ದೆಯಲ್ಲಿ ಪ್ರತಿಯೊಂದಕ್ಕೂ ಶಿಕ್ಷೆ ಇದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಸ್ನೇಹಿತರಾಗಿ ತಮ್ಮ ವೈಯಕ್ತಿಕ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಹಣದ ಬೇಡಿಕೆ ಇಟ್ಟಾಗ ಮನೆಯಲ್ಲಿ ವಿಷಯ ತಿಳಿಸುವ ಧೈರ್ಯ ಮಾಡದೇ ಆತ್ಮಹತ್ಯೆಗೆ ಒಳಗಾಗಿರುವ ಉದಾಹರಣೆಗಳಿವೆ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಇಂದಿನ ದಿನಗಳಲ್ಲಿ ಮಕ್ಕಳು ಹಾಗೂ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ವಿಶೇಷ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಪೋಕ್ಸೋ ಕಾಯ್ದೆಯಲ್ಲಿ ಅಪರಾಧಿಗಳಿಗೆ ಹೆಚ್ಚಿನ ಪ್ರಮಾಣದ ಶಿಕ್ಷೆ ಇದೆ ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಎ.ಟಿ.ರಾಜೇಂದ್ರ, ಜನತಾ ಶಿಕ್ಷಣ ಟ್ರಸ್ಟ್‌ನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಸಣ್ಣಮೊಗ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಲಕ್ಷ್ಮೀ ಪ್ರಸನ್ನ, ಎಂ.ಮಹೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸ್.ರಶ್ಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net