ಉಡುಪಿ: ಜಿಲ್ಲೆಯಲ್ಲಿ ತಾಯಿ ಹಾಗೂ ಮಕ್ಕಳ ಸಾವುಗಳು ಅತ್ಯಲ್ಪವಿದ್ದು, ವೈದ್ಯರು ಸ್ವಾಭಾವಿಕ ಹೆರಿಗೆಗೆ ಹೆಚ್ಚಿನ ಒತ್ತು ನೀಡಬೇಕು. ಅನಿವಾರ್ಯ ತುರ್ತು ಸಂದರ್ಭದಲ್ಲಿ ಮಾತ್ರ ಸಿಜೇರಿಯನ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದರು.
ಬುಧವಾರ ಮಣಿಪಾಲದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಸಹಯೋಗದೊಂದಿಗೆ ಪ್ರಸೂತಿ ತಜ್ಞರಿಗೆ ಹಾಗೂ ವೈದ್ಯಾಧಿಕಾರಿಗಳಿಗೆ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯದ ಸಮಗ್ರ ಅಧ್ಯಯನದ ಕುರಿತು ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಹದಿಹರೆಯದ ಯುವ ಹೆಣ್ಣು ಮಕ್ಕಳಿಗೆ ಪೌಷ್ಟಿಕ ಆಹಾರ ಸೇವನೆ ಸೇರಿದಂತೆ ಸದೃಢ ಆರೋಗ್ಯ ಹೊಂದಲು ತೆಗೆದುಕೊಳ್ಳಬೇಕಾದ ಮಾಗೋರ್ಪಾಯಗಳ ಮಾಹಿತಿ ನೀಡಬೇಕು. ಹೆರಿಗೆಗೂ ಮುನ್ನ ಹೆಣ್ಣು ಮಕ್ಕಳಿಗೆ ಆಗಿಂದಾಗ್ಗೆ ಆರೋಗ್ಯ ತಪಾಸಣೆಗಳನ್ನು ನಿಯಮಿತವಾಗಿ ಮಾಡಬೇಕು. ಆರೋಗ್ಯ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ತಿಳಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರತಿಕ್ ಬಾಯಲ್ ಮಾತನಾಡಿದರು. ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹ ಉಪ ಕುಲಪತಿ ಡಾ. ಶರತ್ ಕೆ. ರಾವ್ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರತ್ನ, ಮಣಿಪಾಲ ಕೆ.ಎಂ.ಸಿ. ಡೀನ್ ಡಾ. ಪದ್ಮರಾಜ್ ಹೆಗ್ಡೆ, ಕರ್ನಾಟಕ ವೈದ್ಯಕಿಯ ಪರಿಷತ್ತಿನ ವೀಕ್ಷಕ ಡಾ. ಪ್ರೇಮಾನಂದ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಕೆ.ಎಂ.ಸಿ. ಮಣಿಪಾಲದ ಸಮುದಾಯ ವೈದ್ಯಕಿಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಜ್ಯೋತ್ಸಾ ಬಿ. ಕೆ ಸ್ವಾಗತಿಸಿ, ಡಾ. ರಕ್ಷಿತಾ ಆರ್. ಶೆಣೈ ನಿರೂಪಿಸಿ, ಸಹ ಪ್ರಾಧ್ಯಾಪಕಿ ಡಾ. ಈಶ್ವರಿ ಕೆ. ವಂದಿಸಿದರು.