ಪರ ವಿರೋಧ ಚರ್ಚೆಗಳ ನಡುವೆಯೇ ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಪ್ರದೀಪ್‌ ಈಶ್ವರ್‌…

pradeep
Published on

ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್​​​​ ಅವರು ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ವಿಚಾರ ಎಲ್ಲರಿಗೂ ತಿಳಿದಿರುವುದೇ. ಇದೇ ಮೊದಲ ಬಾರಿಗೆ ಜನ ಪ್ರತಿನಿಧಿಯೊಬ್ಬರು `ಬಿಗ್‌ಬಾಸ್' ಮನೆ ಪ್ರವೇಶಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದವು. ಅಷ್ಟೇ ಅಲ್ಲ, ಶೋನಲ್ಲಿ ಶಾಸಕರು ಅತಿಥಿಯೋ ಅಥವಾ ಸ್ಪರ್ಧಿಯೋ ಎಂಬ ವಾದ ಕೂಡ ಆರಂಭವಾಗಿತ್ತು. ಎರಡು-ಮೂರು ತಿಂಗಳು ಅವರು 'ಬಿಗಬಾಸ್‌' ಮನೆಯಲ್ಲಿ ಇದ್ದರೆ ಬರಪೀಡಿತ ಜಿಲ್ಲೆಯ ಗತಿ ಏನು? ಎಂದು ರಾಜಕೀಯ ವಿರೋಧಿಗಳು ವಾಗ್ದಾಳಿ ಶುರು ಮಾಡಿದ್ದರು.

ಆದರೀಗ ಪ್ರದೀಪ್‌ ಈಶ್ವರ್‌ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿರುವುದಲ್ಲದೇ, ತಾವು ಬಿಗ್ ಬಾಸ್​​​ ಮನೆಗೆ ಹೋದ ಹಿಂದಿನ ಉದ್ದೇಶವನ್ನು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಹೌದು, ಪ್ರದೀಪ್‌ ಎಲ್ಲರನ್ನೂ ತಾವು ಸ್ಪರ್ಧಿ ಎಂದೇ ನಂಬಿಸಿದ್ದರು. ಆದರೆ ಬಿಗ್​​​​ ಬಾಸ್​​​​ ಮನೆಗೆ ಹೋಗಿ ಕೆಲ ಹೊತ್ತಿನ ಬಳಿಕ ಬಿಗ್‌ ಬಾಸ್‌ ಮಾತನಾಡಿ, ಪ್ರದೀಪ್‌ ಈ ಸೀಸನ್‌ನ ಮೊದಲ ಅತಿಥಿ ಎಂದು ತಿಳಿಸಿದರು.

ಆ ನಂತರ ಪ್ರದೀಪ್ ಕಂಟೆಸ್ಟಂಟ್ಸ್‌ಗೆ ಟಾಸ್ಕ್‌ ಆಡಿಸಿ ಸಿಹಿ ನೀಡಿದರು. ಕೊನೆಗೆ ಪ್ರದೀಪ್‌ ಈಶ್ವರ್‌ ಬಿಗ್‌ ಬಾಸ್‌ ಆದೇಶದಂತೆ ಮನೆಯಿಂದ ಹೊರಬಂದರು.
ರಾಜಕಾರಣಿ ಮಾತ್ರವಲ್ಲದೇ, ಮೋಟಿವೇಷನಲ್​ ಸ್ಪೀಕರ್ ಆಗಿ ಗುರುತಿಸಿಕೊಂಡಿರುವ ಪ್ರದೀಪ್​ ಈಶ್ವರ್ ಬಿಗ್​ ಬಾಸ್​ ಮನೆಯ ಸ್ಪರ್ಧಿಗಳಿಗೆ ಉತ್ಸಾಹ ತುಂಬಿದ್ದಾರೆ. ತಮ್ಮ ಮಾತಿನ ಮೂಲಕ ಸ್ಪರ್ಧಿಗಳ ಮನಸ್ಸಿನ ಮೇಲೆ ಪ್ರಭಾವ ಬೀರಿದ್ದಾರೆ.

ಆಪ್ತರು ಹೇಳಿದ್ದೇನು?
ಈ ರಿಯಾಲಿಟಿ ಷೋ ನಡೆಸಿಕೊಡುವ ನಟ ಕಿಚ್ಚ ಸುದೀಪ್ ಮತ್ತು ಪ್ರದೀಪ್ ಚಿರಪರಿಚಿತರು. ಈ ಕಾರಣದಿಂದ ಶಾಸಕರು ಬಿಗ್​​​​​ ಬಾಸ್​​​ ಮನೆಯಲ್ಲಿ ಪಾಲ್ಗೊಂಡಿದ್ದರು ಎಂದು ಶಾಸಕರ ಆಪ್ತರು ಹೇಳಿದ್ದರು. ಏತನ್ಮಧ್ಯೆ 'ಈ ಷೋನಿಂದ ಬರುವ ಹಣವನ್ನು ಅನಾಥ ಮಕ್ಕಳಿಗೆ ನೀಡುವೆ' ಎಂದು ಬಿಗ್​​​ಬಾಸ್ ಮನೆಯಲ್ಲಿ ಪ್ರದೀಪ್​​​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net