ಶಾಸಕ ಪ್ರದೀಪ್ ಈಶ್ವರ್ ವರ್ತನೆಗೆ ತಿರುಗಿ ಬಿದ್ದ ಸ್ವಪಕ್ಷೀಯರು, ವರಿಷ್ಠರಿಗೆ ದೂರು

IMG-20250624-WA0019.jpg
Published on

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಸ್ವಪಕ್ಷೀಯ ಸರ್ಕಾರದ ವಿರುದ್ಧ ಅನೇಕ ಶಾಸಕರು ಬಹಿರಂಗವಾಗಿ ಆಕ್ರೋಶದ ಹೇಳಿಕೆ ನೀಡುತ್ತಿರುವುದು ಚರ್ಚೆಗೆ ಗ್ರಾಸವಾಗುತ್ತಿದೆ. ಇದರ ನಡುವೆ ಸ್ಥಳೀಯ ಶಾಸಕರ ಧೋರಣೆ ಖಂಡಿಸಿ, ಸಾಮೂಹಿಕವಾಗಿ ಕಾಂಗ್ರೆಸ್ ನಾಯಕರು ಕೆಪಿಸಿಸಿಗೆ ದೂರು ನೀಡಿದ್ದಾರೆ.
ಮೊದಲಿನಿಂದಲೂ ಭಿನ್ನಮತದ ಚಟುವಟಿಕೆಯಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕೈ ಪಾಳಯ ನಲುಗುತ್ತಿದ್ದು, ಕ್ಷೇತ್ರದ ಶಾಸಕ ಪ್ರದಿಪ್ ಈಶ್ವರ್ ವಿರುದ್ಧ ಸ್ವಪಕ್ಷೀಯರು ಮುಗಿಬೀಳುತ್ತಿದ್ದಾರೆ. ಸ್ಥಳೀಯವಾಗಿ ಅಪಸ್ವರಕ್ಕೆ ಬೆಲೆ ಸಿಗದ ಹಿನ್ನೆಲೆಯಲ್ಲಿ ಈಗ ಕೆಪಿಸಿಸಿ ಮೆಟ್ಟಿಲೇರಿದ್ದಾರೆ. ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಗೆ ರಾಜಕೀಯ ಅನಪೇಕ್ಷಿತ ಬೆಳವಣಿಗೆಗಳು, ಪಕ್ಷದ ಹಿತಕ್ಕೆ ಧಕ್ಕೆ, ಶಾಸಕರ ವರ್ತನೆ, ಚುನಾವಣೆಗಳಲ್ಲಿ ಹಿನ್ನಡೆ ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

*ವೀಕ್ಷಕರ ನೇಮಕಕ್ಕೆ ಒತ್ತಾಯ
ಪಕ್ಷದ ಹಿತದೃಷ್ಟಿಯಿಂದ ಕೆಪಿಸಿಸಿಯಿಂದ ಕ್ಷೇತ್ರಕ್ಕೆ ವೀಕ್ಷಕರನ್ನು ನೇಮಿಸಬೇಕು. ಹಿರಿಯ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಬೇಕು. ಹಳೇ ನೇಮಕಾತಿ ರದ್ದುಪಡಿಸಬೇಕು. ಸರ್ಕಾರಿ ನಾಮ ನಿರ್ದೇಶನ ಹಾಗೂ ಬ್ಲಾಕ್ ಹುದ್ದೆಗಳನ್ನು ಹೊಸದಾಗಿ ನೇಮಿಸುವ ಮೂಲಕ ಪಕ್ಷವನ್ನು ಉಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನು ಮುಖಂಡರು ಒತ್ತಾಯಿಸಿದ್ದಾರೆ.

*ಬಗೆಹರಿಯದ ಸಮಸ್ಯೆ
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಹಂತದಲ್ಲಿ ಕ್ಷೇತ್ರದ ಬೆಳವಣಿಗೆಯ ವಿಚಾರವಾಗಿ ದೂರು ಸಲ್ಲಿಸಲಾಗಿದೆ. ರಾಜಿ ಸಂಧಾನದ ಮೂಲಕ ಸಮಸ್ಯೆಯನ್ನು ಬಗೆಹರಿಸುವ ಯತ್ನಕ್ಕೆ ಲ ಸಿಕ್ಕಿಲ್ಲ. ಇದಕ್ಕೆ ಖುದ್ದು ಶಾಸಕರೇ ಸೆಡ್ಡು ಹೊಡೆಯುತ್ತಿದ್ದಾರೆ. ಹಳಬರನ್ನು ಕಡೆಗಣಿಸಿ ಹೊಸಬರಿಗೆ ಮಣೆ ಹಾಕುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ನಿರಂತರವಾಗಿ ಭಿನ್ನಮತೀಯ ನಾಯಕರನ್ನೊಳಗೊಂಡ ಸಭೆಗಳು ನಡೆಯುತ್ತಿವೆ. ಚುನಾವಣೆಗಳಲ್ಲಿ ಪಕ್ಷಕ್ಕೆ ಹಿನ್ನಡೆಯ ಬಗ್ಗೆ ಚರ್ಚೆಯಾಗುತ್ತಿದೆ. ಶಾಸಕರ ನಿಷ್ಠಾವಂತರು ಕಾರ್ಯಕ್ರಮಗಳಲ್ಲಿ ವೈಯಕ್ತಿಕ ವರ್ಚಸ್ಸಿನ ಪ್ರತಿಷ್ಠೆಯಲ್ಲಿ ಗುಣಗಾನದ ಮೂಲಕ ಬೆಳವಣಿಗೆಗಳ ಬಗ್ಗೆ ಸಮರ್ಥಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net