ಮುಖ್ಯಮಂತ್ರಿ ಅವಕಾಶ ಕೈ ತಪ್ಪಿದ್ದಕ್ಕೆ ಬೇಸರ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ| Mallikarjun-Kharge

Mallikarjun Kharge
Published on

ವಿಜಯಪುರ; ಮುಖ್ಯಮಂತ್ರಿ ಆಗುವ ಅವಕಾಶ ಕೈ ತಪ್ಪಿದ್ದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪರೋಕ್ಷವಾಗಿ ನೋವು ತೋಡಿಕೊಂಡಿದ್ದಾರೆ. ಸಿಎಲ್‌ಪಿ ಲೀಡರ್ ಆಗಿ ಐದು ವರ್ಷ ಪಟ್ಟಿದ್ದ ಪರಿಶ್ರಮದ ಫಲವಾಗಿ 1999ರಲ್ಲಿ ಪಕ್ಷ ಅಧಿಕಾರಕ್ಕೆ ಬಂತಾದರೂ, ಕೇವಲ ನಾಲ್ಕು ತಿಂಗಳ ಮುಂಚೆ ಪಕ್ಷಕ್ಕೆ ಬಂದ ಎಸ್.ಎಂ. ಕೃಷ್ಣ ಸಿಎಂ ಆದರೆಂದು ಬೇಸರ ಹೊರಹಾಕಿದ್ದಾರೆ.

ನಾನು ಎಂದಿಗೂ ಅಧಿಕಾರದ ಬೆನ್ನಟ್ಟಿಕೊಂಡು ಹೋಗಿಲ್ಲ. ಲೋಕಸಭೆಯ ವಿಪಕ್ಷ ನಾಯಕನಾಗಿ, ರಾಜ್ಯ ಸಭೆಯ ವಿಪಕ್ಷ ನಾಯಕನಾಗಿ, ಎಐಸಿಸಿ ಅಧ್ಯಕ್ಷನಾಗಿ ಹೀಗೆ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದೇನೆ. ಇದೆಲ್ಲ ಅಧಿಕಾರದಿಂದ ಬೆನ್ನು ಹತ್ತಿ ಹೋಗಿದ್ದರಿಂದ ಸಿಕ್ಕಿದ್ದಲ್ಲ. ಹಾಗೆ ಬೆನ್ನು ಹತ್ತಿ ಹೋದರೆ ಬಿಸಿಲ್ಗುದುರೆಯನ್ನು ಬೆನ್ನು ಹತ್ತಿ ಹೋದಂತೆ, ಅದೆಂದೂ ಸಿಗುವುದಿಲ್ಲ. ಏನೇ ಆಗಲಿ ಪ್ರಯತ್ನ ಬಿಡಬಾರದು. ಸಮಾಜಕ್ಕಾಗಿ ಮನುಕುಲದ ಒಳಿತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕಷ್ಟಪಟ್ಟು ದುಡಿಯಬೇಕು ಮನಸ್ಸಲ್ಲಿ ದುರಾಸೆ ಇರಿಸಿಕೊಂಡು ನಡೆದರೆ ಸಾಧಿಸಲು ಆಗುವುದಿಲ್ಲ ಎಂದು ಹೇಳಿದರು.

ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಜೀವನದ ಅನುಭವ ಬಿಚ್ಚಿಟ್ಟಿದ್ದಾರೆ. 1969ರಲ್ಲಿ ನಗರ ಅಧ್ಯಕ್ಷ ಸ್ಥಾನದಿಂದ ಆರಂಭಗೊಂಡ ರಾಜಕೀಯ ಜೀವನ ಕೆಪಿಸಿಸಿ ಉಪಾಧ್ಯಕ್ಷ, ಅಧ್ಯಕ್ಷ ಸ್ಥಾನದಿಂದ ಹಿಡಿದು ಇದೀಗ ಎಐಸಿಸಿ ಅಧ್ಯಕ್ಷ ಸ್ಥಾನದವರೆಗೂ ಬಂದಿದೆ. ಈ ಹಿಂದೆ ಸಿಎಲ್‌ಪಿ ಲೀಡರ್ ಆಗಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ತಂದೆ. ಆಗ ನಾಲ್ಕು ತಿಂಗಳಲ್ಲಿ ಪಕ್ಷಕ್ಕೆ ಬಂದ ಎಸ್.ಎಂ. ಕೃಷ್ಣ ಅಧಿಕಾರಕ್ಕೆ ಬಂದರು. ಅದು ನಮ್ಮ ಸೇವೆಯ ಫಲವಾಗಿ ಆಡಳಿತಕ್ಕೆ ಬಂದ ಸರ್ಕಾರ ಎಂದಿದ್ದಾರೆ.

ಇನ್ನೂ ಉಪರಾಷ್ಟ್ರಪತಿ ರಾಜೀನಾಮೆ ವಿಚಾರದ ಬಗ್ಗೆ ಮಾತನಾಡಿದ ಖರ್ಗೆ ಉಪರಾಷ್ಟ್ರಪತಿ ಜಗದೀಪ ಧನಕರ್ ಯಾವಾಗಲೂ ಸರ್ಕಾರದ ಪರವಾಗಿ ಇರುತ್ತಿದ್ದರು. ನಮಗೆ ರೈತರ ಸಮಸ್ಯೆಗಳಾಗಲಿ, ಬಡವರ ಸಮಸ್ಯೆಗಳಾಗಲಿ, ಅಂತಾರಾಷ್ಟ್ರೀಯ ಸಮಸ್ಯೆಗಳ ಬಗ್ಗೆಯಾಗಲಿ ಮಾತನಾಡಲು ಅವಕಾಶ ಕೊಡುತ್ತಿರಲಿಲ್ಲ. ಇದೀಗ ಯಾಕೆ ರಾಜೀನಾಮೆ ಕೊಟ್ಟರು ಎಂಬುದು ಗೊತ್ತಿಲ್ಲ. ಅವರನ್ನೇ ಕೇಳಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net