

ಜಂಜ್‌ಗಿರ್-ಚಂಪಾ: ಬಾವಿಯೊಂದರಲ್ಲಿ ಶಂಕಿತ ವಿಷಪೂರಿತ ಅನಿಲ ಸೇವನೆಯಿಂದ ಅಪ್ಪ ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ಛತ್ತೀಸ್‌ಗಢದ ಜಂಜ್‌ಗಿರ್-ಚಂಪಾ ಜಿಲ್ಲೆಯಲ್ಲಿ ನಡೆದಿದೆ.
ಬಿರ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಕಿಕಿದರ್ ಗ್ರಾಮದಲ್ಲಿ ನಡೆದಿದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ (ಎಸ್‌ಡಿಆರ್‌ಎಫ್) ಮೃತದೇಹಗಳನ್ನು ಬಾವಿಯಿಂದ ಹೊರತೆಗೆದಿದ್ದಾರೆ.
ಮೃತರನ್ನು ರಾಮಚಂದ್ರ ಜೈಸ್ವಾಲ್ (60), ರಮೇಶ್ ಪಟೇಲ್ (50), ಅವರ ಇಬ್ಬರು ಮಕ್ಕಳಾದ ರಾಜೇಂದ್ರ (20) ಮತ್ತು ಜಿತೇಂದ್ರ (25), ಮತ್ತು ಟಿಕೇಶ್ವರ್ ಚಂದ್ರ (25) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮಹಾನಿರೀಕ್ಷಕ ಸಂಜೀವ್ ಶುಕ್ಲಾ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ತನ್ನ ಮನೆಯ ಆವರಣದಲ್ಲಿರುವ ಬಾವಿ ಬಳಿ ಮರದ ತುಂಡನ್ನು ತೆಗೆಯಲು ಹೋಗಿದ್ದ ಜೈಸ್ವಾಲ್ ಬಾವಿಗೆ ಬಿದ್ದಿದ್ದಾರೆ. ಇದನ್ನು ಕಂಡ ಪತ್ನಿ ಕಿರಿಚುಕೊಂಡಾಗ ಮಕ್ಕಳು ಸೇರಿದಂತೆ ಮೂವರು ಬಾವಿಗೆ ಧುಮುಕಿದ್ದಾರೆ. ಅವರೂ ಹೊರಗೆ ಬರದಿದ್ದಾಗ ಚಂದ್ರ ಎಂಬುವರು ಬಾವಿಗೆ ಇಳಿದಿದ್ದು ಅವರು ಸಹ ಮೃತಪಟ್ಟಿದ್ದಾರೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಾವಿಯೊಳಗೆ ಕೆಲವು ವಿಷಕಾರಿ ಅನಿಲವನ್ನು ಉಸಿರಾಡಿದ ನಂತರ ಪುರುಷರು ಸಾವನ್ನಪ್ಪಿದ್ದಾರೆ ಎಂದು ತೋರುತ್ತದೆ. ಆದರೆ, ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಸ್‌ಡಿಆರ್‌ಎಫ್ ತಂಡ ಮೃತದೇಹಗಳನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಸಿಎಂ ವಿಷ್ಣು ದೇವ್ ಸಾಯಿ ಸಂತಾಪ, 5 ಲಕ್ಷ ರೂ.ಪರಿಹಾರ: ಈ ಘಟನೆ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, "ಜಂಜಗೀರ್‌ನ ಕಿಕಿದರ್ ಗ್ರಾಮದ ಬಾವಿಯಲ್ಲಿ ವಿಷಪೂರಿತ ಅನಿಲ ಸೇವನೆಯಿಂದ ಐವರ ದುರಂತ ಸಾವಿನ ಬಗ್ಗೆ ಮಾಹಿತಿ ಬಂದಿದೆ. ನಾನು ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸುತ್ತೇನೆ. ಪ್ರತಿ ಸತ್ತವರ ಸಂಬಂಧಿಕರಿಗೆ." ಸಂತ್ರಸ್ತ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.