

ನವದೆಹಲಿ: ಚೆಸ್ ಒಲಿಂಪಿಯಾಡ್ ಸ್ವರ್ಣ ಪದಕ ವಿಜೇತ ತಂಡದ ಸದಸ್ಯ ವಿದಿತ್ ಗುಜರಾತಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ವಿಶೇಷ ಅವಕಾಶಕ್ಕಾಗಿ ಅಜರ್ಬೈಜಾನ್ನ ಬಾಕುನಲ್ಲಿ ನಡೆಯಲಿರುವ 10ನೇ ವುಗರ್ ಗಶಿಮೊವ್ ಸ್ಮಾರಕ ಚೆಸ್ ಸೂಪರ್ ಟೂರ್ನಿಯನ್ನು ತಪ್ಪಿಸಿಕೊಂಡಿದ್ದಾರೆ.
ಕಳೆದ ವರ್ಷ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ವಿದಿತ್ ಈ ಬಾರಿ ಹಾಲಿ ಚಾಂಪಿಯನ್ ಕಣಕ್ಕಿಳಿಯಬೇಕಾಗಿತ್ತು. ಸೆಪ್ಟೆಂಬರ್ 25ರಿಂದ 30ರವರೆಗೆ ನಡೆಯಲಿರುವ ಟೂರ್ನಿಗಾಗಿ 29 ವರ್ಷದ ವಿದಿತ್ ಹಂಗೆರಿಯ ಬುಡಾಪೆಸ್ಟ್ನಲ್ಲಿ ಒಲಿಂಪಿಯಾಡ್ ಆಡಿದ ಬಳಿಕ ಬಾಕುಗೆ ತೆರಳಿದ್ದರು. ಆದರೆ ಪ್ರಧಾನಿ ಮೋದಿ ಅವರು ಬುಧವಾರ ಭಾರತ ಚೆಸ್ ತಂಡವನ್ನು ಭೇಟಿಯಾಗಿ ಸನ್ಮಾನಿಸಲಿದ್ದಾರೆ ಎಂಬ ವಿಷಯ ತಿಳಿದ ಕೂಡಲೆ ಅವರು ಅಲ್ಲಿಂದ ತವರಿಗೆ ಮರಳಿದರು.
ಈ ವಿಷಯವನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಮಹಾರಾಷ್ಟ್ರದ ವಿದಿತ್, "ಪ್ರಧಾನಿಯವರು ನಮ್ಮ ಗೆಲುವಿನ ಬಳಿಕ ಇಷ್ಟು ಕಡಿಮೆ ಅಂತರದಲ್ಲಿ ನಮ್ಮನ್ನು ಭೇಟಿಯಾಗಲು ಸಮಯ ನೀಡಿರುವುದನ್ನು ಕೇಳಿ ಅಪಾರ ಸಂತೋಷವಾಯಿತು. ನಾನು ಈ ವೇಳೆ ಕೂಡ ತಂಡದ ಭಾಗವಾಗಿರಲು ಬಯಸಿದೆ. ಸಂಟಕರು ನನ್ನ ಭಾವನೆಯನ್ನು ಅರಿತು ನನಗೆ ಟೂರ್ನಿಯಿಂದ ಹೊರಗುಳಿಯಲು ಅವಕಾಶ ಕಲ್ಪಿಸಿದರು' ಎಂದು ಹೇಳಿದ್ದಾರೆ. ವಿದಿತ್ ಬದಲಿಗೆ ಭಾರತದ ಮತ್ತೋರ್ವ ಆಟಗಾರ ಅರವಿಂದ್ ಚಿದಂಬರಂ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ.