ಕೇರಳ ಸರ್ಕಾರದಿಂದ ಆರೋಗ್ಯ ರಂಗಕ್ಕೆ ಆದ್ಯತೆ : ಸಚಿವ ಪಿ.ರಾಜೀವನ್ ಹೇಳಿಕೆ

hospital
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಗುಣಮಟ್ಟದ ಆರೋಗ್ಯ ಪರಿಪಾಲನೆ ಪ್ರತಿಯೊಬ್ಬನ ಆಶಯವಾಗಿದ್ದು, ಕೇರಳ ಸರ್ಕಾರ ಈ ನಿಟ್ಟಿನಲ್ಲಿ ಆರೋಗ್ಯ ರಂಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ರಾಜ್ಯ ಕೈಗಾರಿಕೆ ಸಚಿವ ಪಿ.ರಾಜೀವನ್ ಹೇಳಿದರು.

ಚೆರ್ಕಳ-ಜಾಲ್ಸೂರ್ ರಸ್ತೆಯ ಕೆ.ಕೆ.ಪುರಂನಲ್ಲಿ ನೂತನ ಸಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಮಲಯಾಳ ಚಿತ್ರರಂಗದ ನಟಿ ನವ್ಯಾ ನಾಯರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಅಮ್ಮ-ಮಗು ವಿಭಾಗ, ಕಾಸ್ಮೆಟಿಕ್ ವಿಭಾಗ ಉದ್ಘಾಟಿಸಿದರು. ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ವಿಮಾ ವಿಭಾಗ ಉದ್ಘಾಟಿಸಿದರು.

ರೆವರೆಂಡ್ ಫಾದರ್ ಮ್ಯಾಥ್ಯೂ ಬೇಬಿ, ಶಾಸಕರಾದ ಇ.ಚಂದ್ರಶೇಖರನ್, ಎನ್.ಎ.ನೆಲ್ಲಿಕುನ್ನು, ಮಾಜಿ ಸಂಸದ ಪಿ.ಕರುಣಾಕರನ್, ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿಜಿ ಮ್ಯಾಥ್ಯೂ, ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶೈಮಾ, ಮುಳಿಯಾರ್ ಗ್ರಾಪಂ ಅಧ್ಯಕ್ಷೆ ಪಿ.ವಿ.ಮಿನಿ, ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಸ್ ಬೀಗಂ, ಚೆಂಗಳ ಗ್ರಾಪಂ ಅಧ್ಯಕ್ಷ ಖಾದರ್ ಬದರಿಯಾ ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಉದ್ಘಾಟಿಸಿದರು.

ಆಸ್ಪತ್ರೆ ಅಧ್ಯಕ್ಷ ಸಿ.ಎಂ.ಅಬ್ದುಲ್ ಖಾದರ್ ಹಾಜಿ, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಾಮಾಜಿಕ-ಸಾಂಸ್ಕೃತಿಕ ವಲಯದ ಮುಖಂಡರು ಪಾಲ್ಗೊಂಡಿದ್ದರು. ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಮೊಯ್ದೀನ್ ಜಾಸಿರ್ ಆಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಸ್ಪತ್ರೆ ಪಿಆರ್‌ಒ ಬಿ.ಅಶ್ರಫ್ ವಂದಿಸಿದರು.

ಕರೊನಾ ಕಾಲಾವಧಿಯಲ್ಲಿ ಕೇರಳ-ಕರ್ನಾಟಕ ಗಡಿ ಮುಚ್ಚುಗಡೆಗೊಂಡ ಹಿನ್ನೆಲೆಯಲ್ಲಿ ಹಲವು ಮಂದಿ ರೋಗಿಗಳಿಗೆ ಚಿಕಿತ್ಸೆಗಾಗಿ ಗಡಿದಾಟಿ ಸಂಚರಿಸಲಾಗದ ಸ್ಥಿತಿ ಮನಗಂಡು ಜಿಲ್ಲೆಯಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣಕ್ಕೆ ಹಾಕಿಕೊಂಡ ಯೋಜನೆಯನ್ವಯ ಸುಸಜ್ಜಿತ ಹಾಗೂ ಆಧುನಿಕ ಸೌಕರ್ಯ ಹೊಂದಿರುವ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆ ತಲೆಯೆತ್ತಿದೆ. ಕೇರಳ ಹಾಗೂ ಕರ್ನಾಟಕದ 30ಕ್ಕೂ ಹೆಚ್ಚು ತಜ್ಞ ವೈದ್ಯರ ಸೇವೆ ಆಸ್ಪತ್ರೆಯಲ್ಲಿ ಲಭ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net