ಸಾಲ ಕೊಡಿಸ್ತೇನೆ, ಸೇವಾ ಶುಲ್ಕ ಕೊಡಿ ಎಂದು 18 ಜನರ ಬಳಿ 8 ಲಕ್ಷ ರೂಪಾಯಿ ಇಸ್ಕೊಂಡ!

Rupee Value 18 Feb 20
Published on

ಬೆಂಗಳೂರು : ಬ್ಯಾಂಕ್‌ನಲ್ಲಿ ಸಾಲ ಕೊಡಿಸುವುದರ ಜತೆಗೆ ಮರುಪಾವತಿಗೆ ವಿನಾಯಿತಿ ಕೊಡಿಸುವ ಆಮಿಷವೊಡ್ಡಿದ ವ್ಯಕ್ತಿ 18 ಮಂದಿಯಿಂದ ಸೇವಾ ಶುಲ್ಕವೆಂದು 8 ಲಕ್ಷ ರೂ. ಪಡೆದು ವಂಚಿಸಿದ್ದಾನೆ. ಬನ್ನೇರುಘಟ್ಟ ರಸ್ತೆ ಪಿಳ್ಳಗಾನಹಳ್ಳಿಯ ಧನಲಕ್ಷ್ಮಿ ಎಂಬುವರು ಆರೋಪಿ ವಿರುದ್ಧ ದೂರು ನೀಡಿದ್ದು, ಆರೋಪಿ ಶರತ್‌ಕುಮಾರ್ ವಿರುದ್ಧ ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಏಳು ತಿಂಗಳ ಹಿಂದೆ ಧನಲಕ್ಷ್ಮಿಗೆ ಬೇರೆಯವರ ಕಡೆಯಿಂದ ಪರಿಚಯವಾದ ಶರತ್, ಕೈ ಸಾಲ ಕೊಡಿಸುತ್ತೇನೆ. ಬ್ಯಾಂಕ್ ಮ್ಯಾನೇಜರ್ ತನಗೆ ಪರಿಚಯವಿದ್ದು, ದಾಖಲೆ ಕೊಡುವ ಅವಶ್ಯಕತೆ ಇಲ್ಲ. ಅದರಲ್ಲಿಯೂ ಶೇ.25 ಕಮಿಷನ್ ನೀಡಿದರೆ ಸಾಲ ಮರುಪಾವತಿ ಮಾಡುವ ಅಗತ್ಯವೇ ಇರುವುದಿಲ್ಲ ಎಂದು ಆಮಿಷವೊಡ್ಡಿದ್ದ. ಅದಕ್ಕೆ ಧನಲಕ್ಷ್ಮಿ ಮತ್ತು ಅಕ್ಕಪಕ್ಕದ ಮನೆಯವರು ಮರುಳಾಗಿ ಸಾಲ ಪಡೆಯಲು ಒಪ್ಪಿಕೊಂಡಿದ್ದರು. ಮೊದಲು ಧನಲಕ್ಷ್ಮಿಯಿಂದ ಕಮಿಷನ್ ಶುಲ್ಕವೆಂದು 10 ಸಾವಿರ ರೂ. ಪಡೆದುಕೊಂಡಿದ್ದ ಶರತ್, ಕೆಲ ದಿನಗಳ ನಂತರ ಭದ್ರತೆಗೆ ಬಾಂಡ್ ಮಾಡಿಸಬೇಕೆಂದು ಮತ್ತೆ 2 ಸಾವಿರ ರೂ. ಪಡೆದುಕೊಂಡಿದ್ದ. ತಲಾ 5 ಲಕ್ಷ ರೂ. ಸಾಲ ಕೊಡಿಸುವ ಭರವಸೆ ನೀಡಿ 4.25 ಲಕ್ಷ ರೂ. ಗಳನ್ನು ಕಮಿಷನ್ ಎಂದು ಪಡೆದುಕೊಂಡಿದ್ದ.

ಈ ಬಗ್ಗೆ ಧನಲಕ್ಷ್ಮಿ ಪ್ರಶ್ನಿಸಿದಾಗ, ನಿಮ್ಮ ಏರಿಯಾದಲ್ಲಿ ಯಾರ ಬಳಿಯೂ ಹಣ ಇಲ್ಲ. ಅದಕ್ಕಾಗಿ ಅವರ ಪರವಾಗಿ ನಿಮ್ಮ ಕಡೆಯಿಂದ ಕಮಿಷನ್ ಹಣ ಪಡೆದಿದ್ದೇನೆ. ಅವರಿಗೆ ಸಾಲ ಮಂಜೂರಾದ ಕೂಡಲೇ ಅವರಿಂದ ನಿಮಗೆ ಕೊಡಿಸುತ್ತೇನೆ ಎಂದು ನಂಬಿಸಿದ್ದ. ತಿಂಗಳು ಕಳೆದರೂ ಸಾಲ ಕೊಡಿಸದೆ ಇದ್ದಾಗ ಧನಲಕ್ಷ್ಮಿ, ನೆರೆಯವರನ್ನು ಮನೆಯವರನ್ನು ವಿಚಾರಿಸಿದಾಗ ಎಲ್ಲರ ಬಳಿಯೂ ಆತ ಹಣ ಪಡೆದಿರುವುದು ಗೊತ್ತಾಗಿದೆ. ಕೆಲವರ ಬಳಿ ಅಂಗವಿಕಲ ವೇತನ, ವೃದ್ಧಾಪ್ಯವೇತನ, ಗೃಹ ಸಾಲ ನಾನಾ ಆಮಿಷ ಒಡ್ಡಿ 18 ಮಂದಿಯಿಂದ ಅಂದಾಜು 8 ಲಕ್ಷ ರೂ. ಕಮಿಷನ್ ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net