More

    ಮಾಲ್ಡೀವ್ಸ್​ನ​ ಸಂಸತ್ತಿನ ಒಳಗೆ ಬಡಿದಾಡಿಕೊಂಡ ಸಂಸದರು! ವಿಡಿಯೋಗಳು ವೈರಲ್​

    ಮಾಲೆ: ಮಾಲ್ಡೀವ್ಸ್​ ಸಂಸತ್ತು ಭಾನುವಾರ (ಜ.28) ವಿಚಿತ್ರ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಿದೆ. ಅಧ್ಯಕ್ಷ ಮೊಹಮ್ಮದ್ ಮುಯಿಝು ನೇತೃತ್ವದ ಸಚಿವ ಸಂಪುಟಕ್ಕೆ ಸಂಸತ್ತಿನ ಅನುಮೋದನೆಗಾಗಿ ನಡೆದ ವಿಶೇಷ ಅಧಿವೇಶನದಲ್ಲಿ ಸಂಸದರು ಪರಸ್ಪರ ಕಿತ್ತಾಡಿಕೊಳ್ಳುವ ಮೂಲಕ ದೇಶದ ಮಾನವನ್ನು ಹರಾಜು ಹಾಕಿದ್ದಾರೆ.

    ಆಡಳಿತಾರೂಢ ಮೈತ್ರಿಕೂಟ ಪೀಪಲ್ಸ್​ ನ್ಯಾಷನಲ್​ ಕಾಂಗ್ರೆಸ್​ ಮತ್ತು ಪ್ರೊಗ್ಸೆಸ್ಸಿವ್​ ಪಾರ್ಟಿ ಆಫ್​ ಮಾಲ್ಡೀವ್ಸ್​ (ಪಿಪಿಎಂ) ಸಂಸದರು ಹಾಗೂ ಪ್ರತಿಪಕ್ಷ ಮಾಲ್ಡೀವಿಯನ್​ ಡೆಮಾಕ್ರೆಟಿಕ್​ ಪಾರ್ಟಿ(ಎಂಡಿಪಿ)ಯ ಸಂಸದರ ನಡುವೆ ಈ ಗಲಾಟೆ ನಡೆದಿದೆ.

    ಮಾಲ್ಡೀವ್ಸ್‌ನ ಸ್ಥಳೀಯ ಆನ್‌ಲೈನ್ ಸುದ್ದಿವಾಹಿನಿ ‘ಅಧಾಧು’ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋಗಳ ಪ್ರಕಾರ, ಸಂಸದರು ಒಬ್ಬರಿಗೊಬ್ಬರು ಜಾಡಿಸಿ ಒದೆಯುತ್ತಿರುವುದು, ಪರಸ್ಪರ ಹಲ್ಲೆ ಮಾಡುತ್ತಿರುವುದು ಹಾಗೂ ಒಬ್ಬರೊನ್ನೊಬ್ಬರು ಎಳೆದಾಡುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಈ ಎಲ್ಲ ಘಟನೆಗಳಿಂದಾಗಿ ಸಂಸತ್ತಿನಲ್ಲಿ ಭಾರಿ ಗದ್ದಲವೇ ಉಂಟಾಯಿತು.

    ಅದಾಧು ವೆಬ್​ಸೈಟ್​ ಪ್ರಕಾರ ಆಡಳಿತಾರೂಢ ಮೈತ್ರಿಕೂಟದ ಸಂಸದರು, ಪ್ರತಿಪಕ್ಷದ ಸಂಸದರನ್ನು ಸಭಾಂಗಣಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದರು ಎನ್ನಲಾಗಿದೆ. ಮಾಲ್ಡೀವ್ಸ್ ಸಂಸತ್ತಿನಲ್ಲಿ ಬಹುಮತವನ್ನು ಹೊಂದಿರುವ ಎಂಡಿಪಿಯು ಆಡಳಿತ ಪಕ್ಷದ ನಾಲ್ವರು ಸದಸ್ಯರನ್ನು ಮುಯಿಝು ಅವರ ಸಂಪುಟಕ್ಕೆ ಸೇರುವುದನ್ನು ಅನುಮೋದಿಸಲು ನಿರಾಕರಿಸಿದ ನಂತರ ಅವರನ್ನು ನಿರ್ಬಂಧಿಸಲಾಯಿತು ಎಂದು ಹೇಳಲಾಗಿದೆ.

    ನಾಲ್ಕು ಸದಸ್ಯರಿಗೆ ಅನುಮೋದನೆಯನ್ನು ತಡೆಹಿಡಿಯುವ ಎಂಡಿಪಿಯ ಕ್ರಮವು ಜನರಿಗೆ ಒದಗಿಸುವ ಸೇವೆಗಳಿಗೆ ಅಡ್ಡಿಯಾಗಿದೆ ಎಂದು ಆಡಳಿತಾರೂಢ ಪಿಎನ್‌ಸಿ ಮತ್ತು ಪಿಪಿಎಂ ಟೀಕಿಸಿವೆ. ಅಲ್ಲದೆ, ಸ್ಪೀಕರ್​ ರಾಜೀನಾಮೆಗೂ ಸಹ ಪಟ್ಟು ಹಿಡಿದಿವೆ.

    ಎಂಡಿಪಿ ಕ್ರಮದ ಬಗ್ಗೆ ಮುಯಿಜ್ಜು ಮುಖ್ಯ ಸಲಹೆಗಾರ ಮತ್ತು ಪಿಎನ್‌ಸಿ ಅಧ್ಯಕ್ಷ ಅಬ್ದುಲ್ ರಹೀಂ ಅಬ್ದುಲ್ಲಾ ಮಾತನಾಡಿ, ಅನುಮತಿಯಿಲ್ಲದೆ ಮರುನೇಮಕವಾಗಿರುವ ಸಚಿವರ ಹಕ್ಕನ್ನು ಸಮರ್ಥಿಸಿಕೊಂಡರು ಮತ್ತು ಸಂಪುಟಕ್ಕೆ ಅನುಮೋದನೆ ನೀಡಲು ನಿರಾಕರಿಸಿರುವುದು “ಬೇಜವಾಬ್ದಾರಿ”ಯ ಕ್ರಮವಾಗಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

    ಗದ್ದಲದ ಸಮಯದಲ್ಲಿ ಸದನದಲ್ಲಿ ಆಸ್ತಿ ಹಾನಿ ಮಾಡಿದ್ದಾರೆ ಎಂದು ಕೆಲವು ಎಂಡಿಪಿ ಸಂಸದರು ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಕಾರ್ತಿಕ್​ ಮಹೇಶ್​ಗೆ ಒಲಿದ ಬಿಗ್​ಬಾಸ್​ ಸೀಸನ್​ 10ರ ಕಿರೀಟ?! ತವರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ

    ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ; ಕುಮಾರಸ್ವಾಮಿ ಸ್ಪರ್ಧೆ?

    ಜನರತ್ತ ಕೈ ಬೀಸುವ ವ್ಯಕ್ತಿ ರಾಹುಲ್​ ಗಾಂಧಿ ಅಲ್ಲ, ರಾಹುಲ್​ನಂತೆ ಕಾಣುವ ‘ಡ್ಯೂಪ್​’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts