More

    ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ; ಕುಮಾರಸ್ವಾಮಿ ಸ್ಪರ್ಧೆ?

    ಬೆಂಗಳೂರು: ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಲೋಕಸಭೆ ಚುನಾವಣೆ ವಿಚಾರದಲ್ಲಿ ರಾಜಕೀಯ ವಲಯದಲ್ಲಿ ದಿನಕ್ಕೊಂದು ಪುಕಾರುಗಳು ತರಗೆಲೆಯಂತೆ ಹಾರಾಡುತ್ತಿವೆ.

    ಮಂಡ್ಯ, ಹಾಸನ ಕ್ಷೇತ್ರಗಳು ಚರ್ಚೆಯ ತುತ್ತ ತುದಿಯಲ್ಲಿವೆ. ಮಂಡ್ಯದಲ್ಲಿ ಹಾಲಿ ಸಂಸದೆ ಸುಮಲತಾ ಇರುವುದರಿಂದ ಈ ಕ್ಷೇತ್ರದ ಸ್ಪರ್ಧೆ ಕುತೂಹಲ ಕೆರಳಿಸಿದೆ. ಅಂತೆ ಕಂತೆಗಳಿಗೆ ಆಡಂಬೋಲವಾಗಿದೆ.

    ಮಾಜಿ ಸಿಎಂ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರ ಸುತ್ತ ಕೇಂದ್ರೀಕರಿಸಿ ವ್ಯಾಪಕ ಚರ್ಚೆಗಳು, ವ್ಯಾಖ್ಯಾನಗಳು, ಜಾತಿ ಸಮೀಕರಣದ ವಿಶ್ಲೇಷಣೆಗಳು, ಮೈತ್ರಿಯಿಂದ ಮತ ಧೃವೀಕರಣ ವಿಷಯಗಳು ಮಾತಿಗೆ ಸಿಲುಕಿವೆ.

    ಮೈತ್ರಿ ಪಕ್ಷಗಳಿಗೆ ಕಾಂಗ್ರೆಸ್ ಟಾರ್ಗೆಟ್ ಆಗಿದ್ದರೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಸೋಲಿಸುವುದು ಮಹತ್ವದ ಅಜಂಡಾ ಆಗಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಮೈತ್ರಿಪಕ್ಷಗಳಿಂದ ಹೊಸ ಹೊಸ ಹೆಸರುಗಳು ಕೇಳಿ ಬರುತ್ತಿವೆ.

    ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್.ಮಂಜುನಾಥ್ ಅವರನ್ನು ಕಣಕ್ಕಿಳಿಸುವ ವಿಚಾರ ಬಿರುಸಿನ ಚರ್ಚೆಯಲ್ಲಿದೆ. ಅವರು ಸ್ಪರ್ಧಿಸಲು ಒಲವು ತೋರದೇ ಇರುವುದರಿಂದ ಈಗ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸಬೇಕೆಂಬ ಒತ್ತಡವನ್ನು ಬಿಜೆಪಿ ಹೇರುತ್ತಿದೆ.

    ಕುಮಾರಸ್ವಾಮಿ ಕೂಡ ತಾವು ಎಲ್ಲೂ ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿಲ್ಲ. ಮೋದಿ ಹೇಳಿದರೆ ಕುಮಾರಸ್ವಾಮಿ ಲೋಕಸಭೆಗೆ ಸ್ಪರ್ಧಿಸಬಹುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾರ್ಮಿಕ ಮಾತುಗಳನ್ನಾಡಿದ್ದಾರೆ. ಇನ್ನೊಂದು ಕಡೆ ಖುದ್ದು ಕುಮಾರಸ್ವಾಮಿ ಅವರೇ ನನಗೆ ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯದಿಂದ ಸ್ಪರ್ಧಿಸುವಂತೆ ಒತ್ತಡವಿದೆ. ನನ್ನ ಸ್ಪರ್ಧೆ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕುಳಿತು ತೀರ್ಮಾನ ಮಾಡುತ್ತಾರೆ ಎಂದು ಮಗುಮ್ಮಾಗಿದ್ದಾರೆ.

    ಎಲ್ಲೆಲ್ಲಿ ಮೈತ್ರಿಪಕ್ಷಗಳ ಪ್ರಭಾವ?

    ಗ್ರಾಮಾಂತರ ಕ್ಷೇತ್ರದಿಂದ ತಾವೇ ಕಣಕ್ಕಿಳಿಯಲು ಕುಮಾರಸ್ವಾಮಿ ಚಿಂತನೆ ನಡೆಸಿದ್ದು, ಸಾಧಕ ಬಾಧಕಗಳ ಬಗ್ಗೆ ಆಪ್ತರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

    ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸರಾಸರಿ ಮತ ಗಳಿಕೆ ಎಷ್ಟಿದೆ ಎಂಬ ಮಾಹಿತಿಯನ್ನು ಕುಮಾರಸ್ವಾಮಿ ತರಿಸಿಕೊಂಡಿದ್ದಾರಂತೆ. ಬೆಂಗಳೂರು ದಕ್ಷಿಣ, ಆನೇಕಲ್ ಮತ್ತು ಆರ್‌ಆರ್ ನಗರ ಬಿಜೆಪಿ ಭದ್ರಕೋಟೆಯಾಗಿದೆ. ಕುಣಿಗಲ್, ಕನಕಪುರ, ಮಾಗಡಿ, ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಜೆಡಿಎಸ್ ಸಾಂಪ್ರದಾಯಿಕ ಮತಗಳನ್ನು ಹೊಂದಿದೆ. ಹಾಗಾಗಿ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಿದ್ರೆ ಗೆಲುವು ಖಚಿತ ಎನ್ನುವುದು ಕುಮಾರಸ್ವಾಮಿ ಲೆಕ್ಕಾಚಾರ ಆಗಿದೆ ಎನ್ನಲಾಗಿದೆ.

    ಯೋಗೇಶ್ವರ್ ಬಿಜೆಪಿ ಟಿಕೆಟ್ ಆಕಾಂಕ್ಷಿ

    ರಾಮ ಮಂದಿರ ಲೋಕಾರ್ಪಣೆ ಬಳಿಕ ಬಿಜೆಪಿ ಮತ್ತೊಂದು ಸುತ್ತಿನ ಸಮೀಕ್ಷೆ ಮುಂದಾಗಿದ್ದು, ಈ ವರದಿ ಆಧರಿಸಿ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದೆ.
    ಈ ನಡುವೆ ಮಾಜಿ ಸಚಿವ ಸಿ,ಪಿ.ಯೋಗೇಶ್ವರ್ ಸಹ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts