More

    ಬಾಲಕಿಯರ ಹಾಸ್ಟೆಲ್ ಅವ್ಯವಸ್ಥೆಗೆ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಆಕ್ರೋಶ

    ಚನ್ನಗಿರಿ: ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಶಾಸಕ ಬಸವರಾಜು ಶಿವಗಂಗಾ ದಿಢೀರ್ ಭೇಟಿ ನೀಡಿ, ಹಾಸ್ಟೆಲ್ ಅವ್ಯವಸ್ಥೆ ಕಂಡು ಅಧಿಕಾರಿಗಳು ಹಾಗೂ ಮೇಲ್ವಿಚಾರಕರನ್ನು ತರಾಟೆ ತೆಗೆದುಕೊಂಡರು.

    ವಸತಿ ನಿಲಯದ ಅಡುಗೆ ಮನೆ, ಆಹಾರ ದಾಸ್ತಾನು ಕೊಠಡಿ, ಶೌಚಗೃಹ, ಬಟ್ಟೆ ತೊಳೆಯುವ ಸ್ಥಳ, ಗ್ರಂಥಾಲಯ ಮತ್ತಿತರ ಕಟ್ಟಡ ವೀಕ್ಷಿಸಿದರು. ಅಡುಗೆ ಮನೆಗೆ ತೆರಳಿ ತಯಾರಿಸಿದ್ದ ಊಟ ಸೇವನೆ ಮಾಡಿ ಪರಿಶೀಲನೆ ನಡೆಸಿದರು.

    ನಂತರ ಮಾತನಾಡಿ, ಉತ್ತಮ ಶಿಕ್ಷಣ ಪಡೆಯುವ ಉದ್ದೇಶದಿಂದ ಪಾಲಕರು ಮಕ್ಕಳನ್ನು ಹಾಸ್ಟೆಲ್‌ಗಳಿಗೆ ಕಳುಹಿಸಿಕೊಡುತ್ತಾರೆ. ಇಲ್ಲಿ ವ್ಯವಸ್ಥೆ, ವಾತಾವರಣ ಸರಿ ಇಲ್ಲದಿದ್ದರೆ ಕಲಿಕೆಗೆ ಅಡ್ಡಿಯಾಗುತ್ತದೆ. ಅದರಲ್ಲೂ ಇದು ಬಾಲಕಿಯರ ಹಾಸ್ಟೆಲ್ ಆಗಿರುವ ಕಾರಣ ಹೆಚ್ಚಿನ ಜವಾಬ್ದಾರಿ ಇರಬೇಕು ಎಂದರು.

    ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ನೀಡಬೇಕು. ಅಡುಗೆ ತಯಾರಿಸುವ ಮೊದಲು ಮುಂಜಾಗ್ರತಾ ಕ್ರಮ ಅನುಸರಿಸಬೇಕು. ವಿದ್ಯಾರ್ಥಿಗಳು ಆಹಾರ ಸೇವನೆ ಸಮಯದಲ್ಲಿ ಹಾಸ್ಟಲ್‌ನ ಮೇಲ್ವಿಚಾರಕರು ಸ್ಥಳದಲ್ಲೇ ಇರಬೇಕು. ಸರ್ಕಾರ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗಾಗಿ ಎಲ್ಲ ಸೌಲಭ್ಯ ನೀಡುತ್ತಿವೆ. ಸೌಲಭ್ಯಗಳಲ್ಲಿ ಕೊರತೆ ಕಂಡು ಬಂದರೆ ನಾನು ಸಹಿಸುವುದಿಲ್ಲ ಎಂದರು.

    ಶಾಸಕರು ಭೇಟಿ ನೀಡಿದ ಸಮಯದಲ್ಲಿ ಮೇಲ್ವಿಚಾರಕಿಯ ಗೈರು ಗಮನಿಸಿ ಅವರಿಗೆ ದೂರವಾಣಿ ಮೂಲಕ ಮಾತನಾಡಿ, ಹಾಸ್ಟೆಲ್ ವಿದ್ಯಾರ್ಥಿನಿಯರು ಬಡವರೇ ಆಗಿದ್ದು ಅವರಿಗೆ ಯಾವುದೇ ತೊಂದರೆಗಳಾಗದಂತೆ ನೋಡಿಕೊಳ್ಳಬೇಕು ಮತ್ತು ನಿತ್ಯ ಕುಡಿಯಲು ಶುದ್ಧ ನೀರು ನೀಡಬೇಕು. ಅಡುಗೆ ಮನೆ ಮತ್ತು ಶೌಚಗೃಹ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts