

ಪಡುಬಿದ್ರಿ: ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಮತ್ತು ಸಾನ್ನಿಧ್ಯ ವೃದ್ಧಿಗಾಗಿ ನವದುರ್ಗಾ ಲೇಖನ ಯಜ್ಞ ಎಂಬ ನವದುರ್ಗೆಯರ ಹೆಸರಿನೊಂದಿಗೆ ಕಾಪುವಿನ ಅಮ್ಮನ ಹೆಸರನ್ನು ಬರೆಯುವ ಮಹಾಸಂಕಲ್ಪಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಬೆಳಗ್ಗೆ 9ಗಂಟೆ 9 ನಿಮಿಷಕ್ಕೆ ಕ್ಷೇತ್ರದ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ.ಕುಮಾರ ಗುರು ತಂತ್ರಿ ನೇತೃತ್ವದಲ್ಲಿ ಮತ್ತು ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿಗಳ ಉಪಸ್ಥಿತಿಯಲ್ಲಿ ನವ ದಂಪತಿ ಏಕಕಾಲದಲ್ಲಿ ದೀಪ ಬೆಳಗಿ ಪುಷ್ಪಾರ್ಚನೆಯೊಂದಿಗೆ ನವದುರ್ಗಾ ನಾಮ ಜಪ ಪಠಿಸಿದರು. ಶರನ್ನವರಾತ್ರಿ ಮಹೋತ್ಸವದ 9ನೇ ದಿನ ಮತ್ತು ಕ್ಷೇತ್ರದಲ್ಲಿ ವಾಗೀಶ್ವರಿ ಮಾತೆಗೆ ನಡೆಯುವ ಪೂಜೆಯಂದೇ ನವ-ದಂಪತಿಗಳ ಸಹಿತವಾಗಿ ಪದಾಧಿಕಾರಿಗಳು, ಸಿಬ್ಬಂದಿ ಮತ್ತು ಭಕ್ತರ ಸಮಕ್ಷಮದಲ್ಲಿ ನವದುರ್ಗಾ ನಾಮ ಜಪ ಪಠಣೆ ಮಾಡಲಾಯಿತು. ಅ.28ರವರೆಗೆ ನಿತ್ಯ ನಿರಂತರವಾಗಿ ತಾಯಿಯ ಹೆಸರನ್ನು ಪಠಣೆ ಮಾಡಿದರೆ, ಬರೆಯಲು ಅನುಕೂಲವಾಗುತ್ತದೆ, ಹಾಗಾಗಿ ಇಂದಿನಿಂದಲೇ ನವದುರ್ಗೆಯರ ಹೆಸರನ್ನು ಪಠಿಸಲು ಆರಂಭಿಸಿ ಎಂದು ವಿದ್ವಾನ್ ಕೆ.ಪಿ ಕುಮಾರ ಗುರು ತಂತ್ರಿ ಪ್ರಾರ್ಥಿಸಿದರು.
ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ದೇವಳದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಮಹಾದಾನಿ ಆನಂದ ಎಂ.ಶೆಟ್ಟಿ ತೋನ್ಸೆ, ಮುಂಬೈ ಉಚ್ಚ ನ್ಯಾಯಾಲಯದ ವಕೀಲ ಮಹೇಶ್ ಕೋಟ್ಯಾನ್, ಸಾಯಿರಾಧಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಮನೋಹರ್ ಎಸ್.ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ.ರಘುಪತಿ ಭಟ್, ಎಸ್ಕೆಎಫ್ ಸಂಸ್ಥೆಯ ಆಡಳಿತ ನಿರ್ದೇಶಕ ರಾಮಕೃಷ್ಣ ಆಚಾರ್ಯ ಮೂಡುಬಿದಿರೆ, ದೇವಳ ಪ್ರಬಂಧಕ ಗೋವರ್ಧನ್ ಸೇರಿಗಾರ್ ದಂಪತಿ ದೀಪ ಬೆಳಗಿಸಿ ನವದುರ್ಗಾ ನಾಮಜಪ ಪಠಣೆ ಪ್ರಾರಂಭಿಸಿದರು.
ತೋನ್ಸೆ ಆನಂದ ಎಂ.ಶೆಟ್ಟಿ ದಂಪತಿ 9 ಕೆಜಿ ಬೆಳ್ಳಿಯನ್ನು ಮುಂಗಡವಾಗಿ ನೀಡಿ ಅಮ್ಮನ ಸನ್ನಿದಾನಕ್ಕೆ ಅರ್ಪಿಸಿ, ನೂತನ ಬೆಳ್ಳಿ ರಥದ ಕೆಲಸ ಆರಂಭಿಸಲು ಮುಹೂರ್ತ ಮಾಡಿದರು. ಸಾಯಿರಾಧ ಸಮೂಹ ಸಂಸ್ಥೆ 9 ಸಿಬ್ಬಂದಿ ನವದುರ್ಗಾ ಲೇಖನ ಯಜ್ಞವನ್ನು ಬರೆಯುತ್ತೇವೆ ಮತ್ತು ಇತರರನ್ನು ಬರೆಸುತ್ತೇವೆ ಎಂಬ ಸಂಕಲ್ಪ ಸ್ವೀಕರಿಸಿದರು.