ಆಸ್ಪತ್ರೆಯಲ್ಲಿ ಶವಗಳ ಬದಲಾವಣೆ; ಅಪರಿಚಿತನ ಅಂತ್ಯಕ್ರಿಯೆ ಮಾಡಿದ ಕುಟುಂಬ| delhi

funeral
Published on

ನವದೆಹಲಿ; ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಕುಟುಂಬವೊಂದು ತಪ್ಪಾಗಿ ಶವವನ್ನು ಅಂತ್ಯಕ್ರಿಯೆ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಳಿ ಬಂದಿದೆ.

ಪ್ರೇಮ್ ನಗರದ ನಿವಾಸಿ ಪಂಕಜ್ ಕುಮಾರ್ ಎಂಬುವವರು, ಟೆರೇಸ್‌ನಿಂದ ಬಿದ್ದು ಮಾರಣಾಂತಿಕ ಗಾಯಗಳ ನಂತರ ಸಾವನ್ನಪ್ಪಿದರು. ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿತ್ತು. ಅದೇ ಸಮಯದಲ್ಲಿ ನಂಗ್ಲೋಯಿಯಿಂದ ಬಂದ ಭರತ್ ಭೂಷಣ್ ಎಂಬುವವರ ಶವವನ್ನು ಸಹ ಶವಪರೀಕ್ಷೆಗಾಗಿ ಒಳಪಡಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಭರತ್ ಭೂಷಣ್ ಅವರ ಕುಟುಂಬವು ಪಂಕಜ್ ಕುಮಾರ್ ಅವರ ದೇಹವನ್ನು ತಮ್ಮ ಸಂಬಂಧಿಕರದ್ದು ಎಂದು ತಪ್ಪಾಗಿ ಗುರುತಿಸಿದೆ ಎಂದು ಆರೋಪಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ದೇಹವನ್ನು ಪಡೆದುಕೊಂಡು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಪಂಕಜ್ ಕುಮಾರ್ ಕುಟುಂಬವು ಅವರ ದೇಹವನ್ನು ತೆಗೆದುಕೊಳ್ಳಲು ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪಂಕಜ್ ಕುಮಾರ್ ಅವರ ಕುಟುಂಬವು ಆಸ್ಪತ್ರೆಯ ನಿರ್ಲಕ್ಷ್ಯವನ್ನು ಆರೋಪಿಸಿದ್ದು, ಸರಿಯಾದ ಗುರುತಿನ ಕ್ರಮ ಅನುಸರಿಸಿಲ್ಲ ಎಂದು ಹೇಳಿದೆ.

ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ, ಮತ್ತೊಬ್ಬರು ಟೆರೇಸ್‌ನಿಂದ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದರು. ಎರಡೂ ಶವಗಳನ್ನು ವಾಯುವ್ಯ ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ಶವಗಳನ್ನು ಬೆರೆಸಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ದುಃಖಿತ ಕುಟುಂಬವೊಂದು ಅಪರಿಚಿತ ವ್ಯಕ್ತಿಯನ್ನು ತಮ್ಮ ಸಂಬಂಧಿ ಎಂದು ನಂಬಿ ಅಂತ್ಯಸಂಸ್ಕಾರ ಮಾಡಿದೆ ಎಂದು NDTV ವರದಿ ಮಾಡಿದೆ.

(ಏಜೆನ್ಸೀಸ್)

ಆರಂಭದಲ್ಲಿ ಮರಣೋತ್ತರ ಪರೀಕ್ಷೆ ಬಾಕಿ ಇದೆ ಎಂದು ನನಗೆ ಹೇಳಲಾಗಿತ್ತು. ನಂತರ ಅವರು ಶವವನ್ನು ಹುಡುಕುತ್ತಿದ್ದೇವೆ ಮತ್ತು ವಿದ್ಯುತ್ ಸಮಸ್ಯೆಯಿಂದಾಗಿ ಶವವನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆ ಎಂದು ಹೇಳಿದರು. ಬಳಿಕ ಸತ್ಯಾಂಶ ಬಯಲಾಯಿತು ಎಂದು ಮೃತನ ಸಂಬಂಧಿ ಆರೋಪಿಸಿದ್ದಾರೆ. ಇನ್ನೂ ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ಕೋರಿ ಅವರ ಸಹೋದರ ಪೊಲೀಸ್ ಉಪ ಆಯುಕ್ತರಿಗೆ ಲಿಖಿತ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net