

ಗಂಡಸಿ: ಅರಸೀಕೆರೆ ತಾಲೂಕಿನ ಗಂಡಸಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ ದಾಸೇನಹಳ್ಳಿ ದಿನೇಶ್ ಮತ್ತು ಸದಸ್ಯರು ಮಾಡಿಕೊಂಡಿದ್ದ ಆಂತರಿಕ ಕರಾರು ಒಪ್ಪಂದದಂತೆ ದಿನೇಶ್ ರಾಜೀನಾಮೆ ನೀಡಿದ್ದರು. ತೆರವಾದ ಅಧ್ಯಕ್ಷ ಸ್ಥಾನಕ್ಕೆ 12 ಸದಸ್ಯರ ಬಲದ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಮಧ್ಯಾಹ್ನ ಚುನಾವಣೆ ನಡೆಸಿದ್ದು, ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ್ ಹೊರತುಪಡಿಸಿ ಬೇರೆ ಯಾವ ಸದಸ್ಯರೂ ನಾಮಪತ್ರ ಸಲ್ಲಿಸದ ಕಾರಣ ಅವರನ್ನು ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ಸಂತೋಷ್ ಕುಮಾರ್ ಘೋಷಿಸಿದರು.
ನೂತನ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಗಂಡಸಿ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರು ಪಕ್ಷಭೇದ ಮರೆತು ಅಧ್ಯಕ್ಷರಾಗಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಗ್ರಾ.ಪಂ. ಉಪಾಧ್ಯಕ್ಷ ಅನುಸೂಯ, ಮಾಜಿ ಗ್ರಾಪಂ ಅಧ್ಯಕ್ಷ ದಿನೇಶ್, ಮಾಜಿ ಉಪಾಧ್ಯಕ್ಷ ಜಿ.ಸಿ. ನಾಗರಾಜು, ಜೆಡಿಎಸ್ ಮುಖಂಡ ಜಿ.ಸಿ. ಮಂಜಣ್ಣ, ಕಾಂಗ್ರೆಸ್ ಮುಖಂಡರಾದ ಜಿ.ಎನ್. ದ್ಯಾವೇಗೌಡ, ನಾಗರಾಜು, ಮಾಜಿ ತಾಪಂ ಸದಸ್ಯ ಹೊಸೂರು ಗಂಗಾಧರ್, ಕೆಂಕೆರೆ ಕೇಶವಮೂರ್ತಿ, ಗ್ರಾಮದ ಮುಖಂಡ ವಿರೂಪಾಕ್ಷಪ್ಪ, ನಂಜುಂಡೇಗೌಡ, ಮುರುಳಿ, ರವಿ ಇತರರು ಇದ್ದರು.
ಗಂಡಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ್ ಅವರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಅಭಿನಂದಿಸಿದರು. ಜಿ. ಸಿ. ಮಂಜಣ್ಣ, ಅನುಸೂಯ, ದಿನೇಶ್, ನಾಗರಾಜು, ಕುಮಾರ್, ಸುಮಿತ್ರಾ ಇತರರಿದ್ದರು.