ರಥಬೀದಿಯ ದೇವಸ್ಥಾನದಲ್ಲಿ ವಾರ್ಷಿಕೋತ್ಸವ
ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಶ್ರೀಗಳ ಉಪಸ್ಥಿತಿ
ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿಯ ಪುರಾಣ ಪ್ರಸಿದ್ಧ ಚಂದ್ರಮೌಳೇಶ್ವರ ದೇವಾಲಯದಲ್ಲಿ ಮೂರು ದಿನಗಳ ವಾರ್ಷಿಕೋತ್ಸವ (ಗೌಣವೋತ್ಸವ) ಸಂಭ್ರಮದಿಂದ ಮಂಗಳವಾರ ಸಂಪನ್ನಗೊಂಡಿತು.
ದೇಗುಲದ ಆಡಳಿತ ಮುಖ್ಯಸ್ಥರೂ ಆದ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು, ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ಶ್ರೀ ಉಪಸ್ಥಿತಿಯಲ್ಲಿ ನೆರವೇರಿತು. ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ದೇವರಿಗೆ ವಿಶೇಷ ಅಲಂಕಾರ
ಚಂದ್ರಮೌಳೇಶ್ವರನ ವಾರ್ಷಿಕೋತ್ಸವದ ನಿಮಿತ್ತ ರಥೋತ್ಸವ ನಡೆಯಿತು. ದೇವರ ಉತ್ಸವ ಮೂರ್ತಿಯ ರಥಾರೋಹಣ ಮಾಡಲಾಯಿತು. ಕಾರ್ಯಕ್ರಮದ ನಿಮಿತ್ತ ದೇವಾಲಯ ಹಾಗೂ ದೇವರನ್ನು ವಿವಿಧ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಸಂಪ್ರದಾಯದಂತೆ ಬಲಿ ಉತ್ಸವ, ರಥ ಶುದ್ಧಿ, ನರ್ತನದೊಂದಿಗೆ ದೇವರ ರಥಾರೋಹಣ ನಡೆಯಿತು. ಅನ್ನಸಂತರ್ಪಣೆ ಅಂಗವಾಗಿ ಪರ್ಯಾಯ ಪುತ್ತಿಗೆ ಉಭಯ ಶ್ರೀಗಳ ನೇತೃತ್ವದಲ್ಲಿ ಪಲ್ಲ ಪೂಜೆ ಜರುಗಿತು.
ದೇಗುಲದ ಅರ್ಚಕರು ವಿಧಿ-ವಿಧಾನ ನೆರವೇರಿಸಿದರು. ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ವಾಡಿಕೆಯಂತೆ ಚಿತ್ರಾನ್ನ ಸೇವೆ
ಮಳೆಗೆ ಸಂಬಂಧಿಸಿ ಚಂದ್ರಮೌಳೇಶ್ವರನಲ್ಲಿ ಭಕ್ತರು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಇಲ್ಲಿದೆ. ಅಕಾಲಿಕ ಮಳೆಯಿಂದ ತೊಂದರೆ ಆದಲ್ಲಿ ನಿವಾರಣಾರ್ಥವಾಗಿ ಚಿತ್ರಾನ್ನ ಸಮರ್ಪಣೆ ಸೇವೆ ಇಲ್ಲಿದ್ದು, ಫೆಂಗಲ್ ಚಂಡಮಾರುತದಿಂದ ಸೃಷ್ಟಿಯಾಗಿರುವ ಅಕಾಲಿಕ ಮಳೆಯಿಂದ ತೊಂದರೆ ಆಗದಿರಲೆಂದು ದೇವರಿಗೆ ಮಂಗಳವಾರ ಚಿತ್ರಾನ್ನ ಸೇವೆ ಸಲ್ಲಿಸಲಾಯಿತು. ಮಳೆ ಬರದೆ ತೊಂದರೆಯಾದರೆ ಚಂದ್ರಮೌಳೇಶ್ವರನಿಗೆ ಎಳನೀರು ಅಭಿಷೇಕ (ಬೊಂಡಾಭಿಷೇಕ) ಮಾಡುವ ವಾಡಿಕೆಯೂ ಇಲ್ಲಿದೆ.
ಉಡುಪಿ ಹೆಸರಿಗೆ ಕಾರಣನಾದ ಚಂದಿರ!
ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಡುಪಿಯ ಚಂದ್ರಮೌಳೇಶ್ವರ ದೇವಾಲಯ ಪುರಾತನ ದೇಗುಲವಾಗಿದೆ. ಈ ಭಾಗದಲ್ಲಿ ಮೊದಲ ಉತ್ಸವ ಆರಂಭಗೊಳ್ಳುವುದೇ ಇಲ್ಲಿಂದ. ಮಾರ್ಗಶೀರ್ಷ ದ್ವೀತಿಯ ತಿಥಿಯಂದು ಇಲ್ಲಿ ಉತ್ಸವ ನಡೆಯುತ್ತದೆ. ಧ್ವಜಾರೋಹಣದಿಂದ ಮೊದಲ್ಗೊಂಡು ಮೂರುದಿನ ಉತ್ಸವ ನಡೆಯುತ್ತದೆ. ಶಾಪವಿಮೋಚನೆಗಾಗಿ ಶಿವನ ಅನುಗ್ರಹ ಪಡೆಯಲು ಚಂದ್ರನು ಉಡುಪಿಯ ಅಬ್ಜಾರಣ್ಯ (ಈಗಿನ ಪಿಪಿಸಿ ಕಾಲೇಜಿನ ಪ್ರದೇಶ)ದಲ್ಲಿ ತಪಸ್ಸನ್ನು ಮಾಡಿದ ಎಂಬ ಐತಿಹ್ಯವಿದೆ. ‘ಉಡು’ ಎಂದರೆ ನಕ್ಷತ್ರ, ‘ಪ’ ಎಂದರೆ ಅಧಿಪತಿ ಅಥವಾ ಪಾಲಕ ಎನ್ನುವುದು ಸಂಸತದ ಅರ್ಥವಾಗಿದೆ. ನಕ್ಷತ್ರಗಳ ದೊರೆ ‘ಉಡುಪ’ನಿಂದಲೇ ಉಡುಪಿ ಹೆಸರು ಬರಲು ಕಾರಣವಾಗಿದೆ.