

ಅಮರಾವತಿ: ತಿರುಪತಿ ತಿಮ್ಮಪ್ಪ ದೇಗುಲದ ಪ್ರಸಾದ ಲಡ್ಡು ವಿಚಾರವಾಗಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತೊಮ್ಮೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗನ್ ನಡೆ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ. ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಆಳವಾಗಿ ತನಿಖೆ ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. tirupati laddu
ಟಿಡಿಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಏನೇ ಮಾಡಿದರೂ ಶ್ರೀವೆಂಕಟೇಶ್ವರ ದೇವರನ್ನು ಮನಸ್ಸಿನಲ್ಲಿ ಸ್ಮರಿಸಿದ ನಂತರವೇ ಮುಂದಡಿ ಇಎಉತ್ತೇನೆ. ನಮ್ಮ ಮನೆಯ ದೀಪ ವೆಂಕಟೇಶ್ವರ ಸ್ವಾಮಿ. ಬಾಲ್ಯದಲ್ಲಿ ಮನೆಯ ಸಮೀಪದಿಂದ ಕಾಣುತ್ತಿದ್ದ ತಿರುಮಲ ಬೆಟ್ಟ ವೀಕ್ಷಿಸಿ ನಮಸ್ಕರಿಸುತ್ತಿದ್ದೆ. ಅಷ್ಟು ಗಾಢ ಪ್ರಭಾವ ಆ ದೇವರು ನಮ್ಮ ಮೇಲೆ ಬೀರಿದ್ದಾರೆ. ಆ ಭಗವಂತನ ಸನ್ನಿಧಾನಕ್ಕೆ ಎಳ್ಳಷ್ಟೂ ಅಪಚಾರ ಮಾಡುವುದಿಲ್ಲ ಎಂದರು.
ಆದರೆ, ಜಗನ್ ಆಳ್ವಿಕೆಯಲ್ಲಿ ದೇವರ ವಿಗ್ರಹಗಳನ್ನು ಧ್ವಂಸ ಮಾಡುವ ಅನೇಕ ಅನಾಚಾರಗಳು ನಡೆದಿವೆ. ಜಗತ್ತಿನಾದ್ಯಂತ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದರು.
ತಿಮ್ಮಪ್ಪ ದೇವರ ಜೊತೆ ಯಾರೂ ಆಟವಾಡಬಾರದು. ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. 1 ಕೆಜಿಗೆ 600 ರೂಪಾಯಿಗಿಂತ ಹೆಚ್ಚು ಮಾರಾಟವಾಗುತ್ತಿದ್ದ ತುಪ್ಪ 320 ರೂಪಾಯಿಗೆ ಹೇಗೆ ದೊರೆಯಿತು? ರಿವರ್ಸ್ ಟೆಂಡರ್ ಹೆಸರಲ್ಲಿ ಎಲ್ಲ ವ್ಯವಸ್ಥೆಗಳನ್ನು ನಾಶ ಮಾಡಿದ್ದಾರೆ ಎಂದು ಜಗನ್ ವಿರುದ್ಧ ಸಿಎಂ ಚಂದ್ರಬಾಬು ಕಿಡಿಕಾರಿದರು.
ತಿರುಮಲದ ಪಾವಿತ್ರ್ಯತೆ ಕಾಪಾಡುವ ವಿಚಾರವಾಗಿ ವೇದ ವಿದ್ವಾಂಸರು ಹಾಗೂ ಮಠಾಧೀಶರೊಂದಿಗೆ ಚರ್ಚೆ ನಡೆಸಲಾಗುವುದು. ಹಿಂದಿನ ಸರ್ಕಾರದ ಅವಧಿಯಲ್ಲಿ ದೇವಸ್ಥಾನಗಳಲ್ಲಿ ಹಲವು ಅನಾಚಾರಗಳು ನಡೆದಿವೆ ಎಂದು ಸಿಎಂ ಚಂದ್ರಬಾಬು ಟೀಕಿಸಿದರು.
ಲಡ್ಡು ಪ್ರಸಾದ ವಿಚಾರವಾಗಿ ಎನ್ ಡಿಡಿಬಿ ವರದಿ ನೀಡಿದರೆ ಉತ್ತರ ನೀಡದೆ ನಮ್ಮ ಮೇಲೆ ವಾಗ್ಧಾಳಿ ಮಾಡುವವರನ್ನು ಏನು ಮಾಡಬೇಕು? 320 ರೂ.ಗೆ 1ಕೆಜಿ ಹಸುವಿನ ತುಪ್ಪ ಹೇಗೆ ಸಿಗುತ್ತದೆ? ಲಡ್ಡು ತಯಾರಿಕೆಯಲ್ಲಿ ರಿವರ್ಸ್ ಟೆಂಡರ್ ನಡೆದಿರುವುದು ಸುಳ್ಳಾ ಎಂದು ಪ್ರಶ್ನಿಸಿದರು.
'ನನ್ನ ಬಾಯಿಂದ ದೇವರು ಸತ್ಯವನ್ನು ಹೇಳಿಸಿದ್ದಾರೆ. ನಾವು ಕೇವಲ ನಿಮಿತ್ತ. ಏಳುಬೆಟ್ಟದ ಒಡೆಯನಾದ ಆ ದೇವರು ಎಲ್ಲವನ್ನೂ ಮಾಡುತ್ತಾನೆ. ಟಿಟಿಡಿ ವಿಚಾರದಲ್ಲಿ ಮುಂದೇನು ಮಾಡಬೇಕು? ಅದನ್ನು ಹೇಗೆ ಮಾಡುವುದು ಎಂಬುದನ್ನು ನಾವು ಚರ್ಚಿಸುತ್ತಿದ್ದೇವೆ. ಶುದ್ಧೀಕರಣಕ್ಕೆ ಸಂಪ್ರೋಕ್ಷಣೆ ಹೇಗಿರಬೇಕು ಎಂಬುದನ್ನು ಜೀಯರು, ಕಂಚಿ ಪೀಠಾಧಿಪತಿಗಳು ಹಾಗೂ ಸನಾತನ ಧರ್ಮ ವಿದ್ವಾಂಸರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ. ಆ ನಿಟ್ಟಿನಲ್ಲಿ ಈಗಾಗಲೇ ಚಿಂತನೆ ನಡೆಸುತ್ತಿದ್ದೇವೆ’ ಎಂದು ಚಂದ್ರಬಾಬು ಹೇಳಿದ್ದಾರೆ.