

ಅಮರಾವತಿ: ಒಬ್ಬ ವ್ಯಕ್ತಿಗೆ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮಾತ್ರ ಆತನಿಗೆ ಸರ್ಪಂಚ್, ಮುನ್ಸಿಪಾಲ್, ಮೇಯರ್ ಚುನಾವಣೆಗೆ ಸ್ಫರ್ಧಿಸಲು ಅವಕಾಶ ನೀಡಲಾಗುವುದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರು ಹೇಳಿದ್ದಾರೆ.
ಕುಸಿಯುತ್ತಿರುವ ಜನಸಂಖ್ಯೆಯ ಬಗ್ಗೆ ಮಾತನಾಡಿದ ಚಂದ್ರಬಾಬು ನಾಯ್ಡು (Chandrababu Naidu), ಒಂದು ಕಾಲದಲ್ಲಿ ಹೆಚ್ಚು ಮಕ್ಕಳಿರುವ ವ್ಯಕ್ತಿಗಳಿಗೆ ಪಂಚಾಯತ್ (ಚುನಾವಣೆ) ಅಥವಾ ಸ್ಥಳೀಯ ಸಂಸ್ಥೆಗಳಿಗೆ ಸ್ಪರ್ಧಿಸಲು ಅವಕಾಶವಿರಲಿಲ್ಲ. ಆದರೆ, ಇಂದಿನ ಕಾಲಘಟ್ಟದಲ್ಲಿ ಕಡಿಮೆ ಮಕ್ಕಳನ್ನು ಹೊಂದಿರುವವರಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ ನೀಡಬಾರದು. ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮಾತ್ರ ಸರಪಂಚ್, ಕೌನ್ಸಿಲರ್ ಅಥವಾ ಮೇಯರ್ ಸ್ಪರ್ಧಿಸಲು ಅವಕಾಶ ನೀಡಲಾಗುವುದು.
ನಮ್ಮ ತಂದೆ-ತಾಯಂದಿರು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ, ಈಗಿನ ಪೀಳಿಗೆಯವರು ಒಂದು ಮಗುವಿಗೆ ಬಂದಿದ್ದಾರೆ. ಇನ್ನು ದುಪ್ಪಟ್ಟು ಆದಾಯ ಹೊಂದಿರುವವರು ಮಕ್ಕಳು ಬೇಡ ಎಂದು ಮಜಾ ಮಾಡುತ್ತಿದ್ದಾರೆ. ಅವರ ಪೋಷಕರು ಹಾಗೇ ಯೋಚನೆ ಮಾಡಿದ್ದರೆ, ಅವರು ಇಂದು ಜಗತ್ತಿನಲ್ಲಿ ಇರುತ್ತಿರಲಿಲ್ಲ. ಎಲ್ಲಾ ದೇಶಗಳು ಇಂದು ಈ ತಪ್ಪು ಮಾಡುತ್ತಿದೆ. ಸರಿಯಾದ ಸಮಯದಲ್ಲಿ ನಾವು ನಿರ್ಧರಿಸಬೇಕಿದೆ. ಹೆಚ್ಚು ಮಕ್ಕಳಿಗೆ ಪ್ರಾಶಸ್ತ್ಯ ನೀಡುವುದು ಒತ್ತಡವಲ್ಲ. ಆದರೆ, ಸಮಯ ನಮ್ಮ ಕೈ ಜಾರುತ್ತಿದೆ ಎಂದು ಹೇಳಿದ್ದಾರೆ.
ದಕ್ಷಿಣ ಕೊರಿಯಾ, ಜಪಾನ್ ಮತ್ತು ಯುರೋಪ್ ಖಂಡಗಳು ಕುಸಿಯುತ್ತಿರುವ ಜನಸಂಖ್ಯೆ ಅಪಾಯದ ಬಗ್ಗೆ ಅರಿವನ್ನು ಹೊಂದಿಲ್ಲ. ಆದರೆ, ಅವರು ಕೇವಲ ಸಂಪತ್ತು ಸೃಷ್ಟಿ, ಆದಾಯ ಹೆಚ್ಚಳ, ದೇಶ ಮುನ್ನಡೆಯತ್ತ ಯೋಚಿಸುತ್ತಿದ್ದಾರೆ. ಇದೀಗ ಅವರಿಗೆ ಜನರ ಅವಶ್ಯಕತೆ ಎದುರಾಗಿದೆ. ಅವರಿಗೆ ನಾವು ಜನರನ್ನು ಕಳುಹಿಸುವಂತೆ ಆಗಿದೆ. ಇದೀಗ ಇಂತಹ ಪರಿಸ್ಥಿತಿಗೆ ನಾವು ಬಂದಿದ್ದೇವೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬಯು ನಾಯ್ಡು (Chandrababu Naidu) ಕುಸಿಯುತ್ತಿರುವ ಜನಸಂಖ್ಯೆಯ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.