ಮೂರು ಮತ್ತೊಂದು...; ಒಂದೇ ತಿಂಗಳಲ್ಲಿ ಅರಸಿ ಬಂದ ನಾಲ್ಕು ಅವಕಾಶಗಳು

pramod
Published on

ಬೆಂಗಳೂರು: ಮೊದಲ ಚಿತ್ರ ಬಿಡುಗಡೆಯಾಗೋಕೆ ನಾಲ್ಕು ವರ್ಷ ಬೇಕಾಯ್ತು ... ಈಗ ಒಂದೇ ತಿಂಗಳ ಅವಧಿಯಲ್ಲಿ ನಾಲ್ಕು ಚಿತ್ರಗಳಲ್ಲಿ ಅವಕಾಶ ಸಿಕ್ಕಾಯ್ತು ...

ಇದು ಪ್ರಮೋದ್ ಅಲಿಯಾಸ್ ‘ಪ್ರೀಮಿಯರ್ ಪದ್ಮಿನಿ’ ಪ್ರಮೋದ್​ನ ಬದಲಾದ ಪರಿಸ್ಥಿತಿ. ಒಂದು ಕಾಲಕ್ಕೆ ಒಂದು ಚಿತ್ರ ಬಿಡುಗಡೆಯಾದರೆ ಸಾಕು ಎಂದು ಕಾಯುತ್ತಿದ್ದ ಪ್ರಮೋದ್, ಈಗ ಒಂದೇ ತಿಂಗಳ ಅಂತರದಲ್ಲಿ ‘ಇಂಗ್ಲೀಷ್ ಮಂಜ’, ‘100 ಮಂಕೀಸ್’, ‘ರತ್ನನ್ ಪ್ರಪಂಚ’ ಮತ್ತು ಗೀತ ಸಾಹಿತಿ ಸಂತೋಷ್ ನಾಯಕ್ ನಿರ್ದೇಶನದ ಹೆಸರಿಡದ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈ ಪೈಕಿ ಈಗಾಗಲೇ ಎರಡು ಚಿತ್ರಗಳ ಮುಹೂರ್ತವಾಗಿ, ಇನ್ನೇನು ಚಿತ್ರೀಕರಣ ಸಹ ಶುರುವಾಗಲಿದೆ.

ಕಾರಣ ಏನಿರಬಹುದು?: ಪ್ರಮೋದ್​ಗೆ ಕನ್ನಡ ಚಿತ್ರರಂಗದಲ್ಲಿ ಇಷ್ಟೊಂದು ಡಿಮಾಂಡ್ ಕುದುರಲು ಕಾರಣವೇನು? ಇಂಥದ್ದೊಂದು ಪ್ರಶ್ನೆಯನ್ನು ಅವರ ಮುಂದಿಟ್ಟರೆ, ಲಾಕ್​ಡೌನ್ ಮತ್ತು ‘ಪ್ರೀಮಿಯರ್ ಪದ್ಮಿನಿ’ ಎಂಬ ಉತ್ತರ ಅವರಿಂದ ಬರುತ್ತದೆ. ‘‘ಪ್ರೀಮಿಯರ್ ಪದ್ಮಿನಿ’ ಚಿತ್ರವನ್ನು ಬಹಳಷ್ಟು ಜನ ಲಾಕ್​ಡೌನ್ ಸಮಯದಲ್ಲಿ ನೋಡಿ ಇಂಪ್ರೆಸ್ ಆಗಿರುವ ಸಾಧ್ಯತೆ ಇದೆ. ಅದಕ್ಕೆ ಸರಿಯಾಗಿ ಇತ್ತೀಚೆಗೆ ಸಿಕ್ಕ ಹಲವರು, ಆ ಚಿತ್ರದ ಬಗ್ಗೆಯೇ ಮಾತಾಡುತ್ತಿದ್ದಾರೆ. ನನ್ನ ಅಭಿನಯ, ಹೈಟು, ಪರ್ಸನಾಲಿಟಿ ... ಚೆನ್ನಾಗಿದೆ ಎನ್ನುತ್ತಿದ್ದಾರೆ. ಬಹುಶಃ ಅದೇ ಕಾರಣಕ್ಕೆ ಈಗ ಹೊಸ ಸಿನಿಮಾಗಳು ಸಿಗುತ್ತಿವೆ ಅನಿಸುತ್ತಿದೆ. ಒಂದು ಕಾಲದಲ್ಲಿ ನನಗೆ ಅವಕಾಶ ಸಿಗಲಿ ಎಂದು ಕಾಯುತ್ತಿದ್ದೆ. ಈಗ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ’ ಎಂದು ಖುಷಿಪಡುತ್ತಾರೆ ಪ್ರಮೋದ್. ಇನ್ನು ನಾಲ್ಕು ಚಿತ್ರಗಳ ಪೈಕಿ ಒಂದೊಂದರಲ್ಲಿ ಒಂದೊಂದು ವಿಭಿನ್ನ ಪಾತ್ರ ಸಿಕ್ಕಿದೆಯಂತೆ. ‘ನನಗೆ ಮುಂಚಿನಿಂದಲೂ ಮಾಸ್ ಮತ್ತು ರೌಡಿಸಂ ಸಿನಿಮಾಗಳು ಇಷ್ಟ. ಅದಕ್ಕೆ ಸರಿಯಾಗಿ ‘ಇಂಗ್ಲೀಷ್ ಮಂಜ’ ಚಿತ್ರದಲ್ಲೊಂದು ಅಂತಹ ಪಾತ್ರ ಸಿಕ್ಕಿದೆ. ಇನ್ನು ‘100 ಮಂಕೀಸ್’ನಲ್ಲಿ ಕ್ಯಾಬ್ ಡ್ರೖೆವರ್ ಪಾತ್ರ. ಅದೊಂದು ಪಕ್ಕಾ ಕಾಮಿಡಿ ಚಿತ್ರ. ‘ರತ್ನನ್ ಪ್ರಪಂಚ’ದಲ್ಲಿ ನನ್ನದು ಸೆಕೆಂಡ್ ಲೀಡ್. ಧನಂಜಯ್ ಅವರ ಜತೆಗೆ ಸಾಗುವ ಪಾತ್ರ ನನ್ನದು. ಉತ್ತರ ಕರ್ನಾಟಕದ ರಗಡ್ ಯುವಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ.

ಮುಂದಿನ ಯೋಜನೆ ಏನು?: ಒಟ್ಟಿನಲ್ಲಿ ಮುಂದಿನ ಒಂದು ವರ್ಷದಲ್ಲಿ ಪ್ರಮೋದ್ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆ ಯಾಗುವ ಸಾಧ್ಯತೆ ಇದೆ. ಆ ಸಂಖ್ಯೆ ಇನ್ನಷ್ಟು ಜಾಸ್ತಿಯಾದರೂ ಆರ್ಶ್ಚಯವಿಲ್ಲ. ಈ ಮಧ್ಯೆ ಲಾಕ್​ಡೌನ್ ಸಮಯದಲ್ಲಿ ಕೂತು ಒಂದು ಕಥೆ ಮಾಡಿಟ್ಟುಕೊಂಡಿದ್ದಾರಂತೆ ಪ್ರಮೋದ್. ಅದನ್ನು ತೆರೆಯ ಮೇಲೆ ತರುವಾಸೆ. ‘ನನ್ನ ಸ್ನೇಹಿತರೇ ಹಣ ಹಾಕು ವುದಕ್ಕೆ ಮುಂದೆ ಬಂದಿದ್ದಾರೆ. ಬಹುಶಃ ಮುಂದಿನ ವರ್ಷದ ಕೊನೆಗೆ ಆ ಚಿತ್ರ ನಿರ್ದೇ ಶಿಸುವ ಆಸೆ ಇದೆ’ ಎನ್ನುತ್ತಾರೆ ಪ್ರಮೋದ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net