

ಮೈಸೂರು: ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಖಾಸಗಿ ಆಸ್ತಿಯ ಪಟ್ಟಿಯಲ್ಲಿದೆ. ಅದರ ಪ್ರಾಧಿಕಾರ ಮಾಡುವುದು ಕಾನೂನುಬದ್ಧವಲ್ಲ. ದೇಗುಲದ ನಿರ್ವಹಣೆ ನಮಗೆ ನೀಡಿದರೆ ನಾವು ಮಾಡಲು ಸಿದ್ಧ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ಮೈಸೂರು ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಚಾಮುಂಡಿಬೆಟ್ಟವು ಮೈಸೂರು ರಾಜವಂಶಸ್ಥರ ಖಾಸಗಿ ಆಸ್ತಿ. ಅದು ನಮ್ಮ ಸ್ವತ್ತು. ಅದನ್ನು ಬಿಟ್ಟುಕೊಡಬೇಕು ಎಂದು ಹೇಳಿದ್ದಾರೆ.
ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಪ್ರಾಧಿಕಾರ ರಚನೆ ಮೂಲಕ ಚಾಮುಂಡಿಬೆಟ್ಟದ ಮೇಲೆ ರಾಜ್ಯ ಸರ್ಕಾರವು ಮಾಲೀಕತ್ವದ ಹಕ್ಕು ಸಾಧಿಸಲು ಹೊರಟಿದೆ. ಇದಕ್ಕೆ ವಿರೋಧ ಇದೆ. ಹೀಗಾಗಿ, ಈ ಪ್ರಾಧಿಕಾರದ ರಚನೆಯ ವಿರುದ್ಧ ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ ಎಂದು ತಿಳಿಸಿದರು.
1950ರಲ್ಲಿ ಭಾರತ ದೇಶದೊಂದಿಗೆ ಮೈಸೂರು ಸಂಸ್ಥಾನವು ವಿಲೀನಗೊಂಡಿತು. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಮೈಸೂರು ಸಂಸ್ಥಾನದೊಂದಿಗೆ ಒಪ್ಪಂದವಾಗಿದೆ. ಮೈಸೂರು ಸಂಸ್ಥಾನದ ಖಾಸಗಿ ಆಸ್ತಿಗಳನ್ನು ಅಂದೇ ಪಟ್ಟಿ ಮಾಡಲಾಗಿದ್ದು, ಅದರಲ್ಲಿ ಚಾಮುಂಡಿಬೆಟ್ಟವೂ ಸೇರಿದೆ. ಹೀಗಾಗಿ, ಇದು ನಮ್ಮ ಖಾಸಗಿ ಆಸ್ತಿ ಎನ್ನುವ ಮೂಲಕ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತಪಡಿಸಿದರು.
ರಾಜಮನೆತನದ ಖಾಸಗಿ ಆಸ್ತಿಯ ಪಟ್ಟಿಯಲ್ಲಿ ಚಾಮುಂಡಿಬೆಟ್ಟ, ಚಾಮುಂಡೇಶ್ವರಿ ದೇವಸ್ಥಾನ, ಅದಕ್ಕೆ ಸಂಬಂಧಿಸಿದ ವಿವಿಧ ಕಟ್ಟಡಗಳು, ನಂದಿ ವಿಗ್ರಹ, ರಾಜೇಂದ್ರ ವಿಲಾಸ ಅರಮನೆ, ಉದ್ಯಾನ, ಮೈದಾನ, ಹಳೇ ಅರಮನೆಗಳು, ದೇವಿಕೆರೆ, 3 ಪಂಪ್‌ಹೌಸ್‌ಗಳು, ಮಹಬಲೇಶ್ವರ ದೇವಸ್ಥಾನ, ಜ್ವಾಲಾಮುಖಿ ದೇವಸ್ಥಾನ ಸೇರಿದಂತೆ ಇನ್ನಿತರ ಕಟ್ಟಡಗಳು ಮತ್ತು ಸ್ವತ್ತುಗಳು ಸೇರಿವೆ ಎಂದು ತಿಳಿಸಿದ್ದಾರೆ.