ಚಾಮರಾಜನಗರ: ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಪ್ರೇರಣಾ ಪರೀಕ್ಷೆ ಚೈತ್ರಯಾತ್ರೆಯನ್ನು ಮಾ.12 ರಂದು ಮುಕ್ತಾಯಗೊಳಿಸಲಾಗುವುದು ಎಂದು ಬಳ್ಳಾರಿ ಜಿಲ್ಲೆಯ ಕುರಗೋಡುವಿನ ರಾಜ್ಯ ಪ್ರಶಸ್ತಿ ಪುರಸ್ಕೃತ, ನಿವೃತ್ತ ಶಿಕ್ಷಕ ಗಾದಿಲಿಂಗಪ್ಪ ಮಾಹಿತಿ ನೀಡಿದರು.
ಕಳೆದ ಹಲವಾರು ವರ್ಷಗಳಿಂದಲೂ ಅನಾಥ, ಅಂಗವಿಕಲ, ಬಡ, ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ನವೋದಯ ಕೋಚಿಂಗ್, ಇಂಜಿನಿಯರಿಂಗ್, ಐಟಿಐ ಹಾಗೂ ಇನ್ನಿತರ ವಿಭಾಗಗಕ್ಕೆ ಅವರಿಗೆ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಶ್ರಮವಹಿಸಿದ್ದೇನೆ. ಸರ್ಕಾರಿ ಶಾಲಾ ಮಕ್ಕಳಿಗೆ ಪ್ರೇರಣಾ ಉಪನ್ಯಾಸ ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸೆ.5ರಿಂದ ಇಲ್ಲಿಯವರೆಗೂ ಪರೀಕ್ಷಾ ಪ್ರೇರಣಾ ಚೈತ್ರಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಬಂದಿದ್ದು, ಮಾ.12ರಂದು ಯಳಂದೂರಿನ ಸರ್ಕಾರಿ ಆದರ್ಶ ಶಾಲೆಯಲ್ಲಿ ಸಮಾರೋಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದಲ್ಲದೆ ತಮಿಳುನಾಡು ಗಡಿಭಾಗದ ಕನ್ನಡ ಶಾಲೆಯಲ್ಲಿ ಇಬ್ಬರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ವಿನಯ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕಿರಣ್ ಹಾಜರಿದ್ದರು.