ಗುಡ್ಡಗಾಡು ಶಾಲೆಗಳಿಗೆ ಧ್ವನಿವರ್ಧಕ ವಿತರಣೆ

14chn7
Published on

ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟದ ಗುಡ್ಡಗಾಡು ಪ್ರದೇಶದಲ್ಲಿರುವ ತೊಳಸಿಗೆರೆ, ಗೊರೆಸಾಣೆ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಚಾಮರಾಜನಗರದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ಗೌರವಾಧ್ಯಕ್ಷ ಸುರೇಶ್‌ಗೌಡ ಮತ್ತು ನಂಜನಗೂಡು ಸಮಾಜ ಸೇವಕಿ ಸುಧಾ ಶಿವಕುಮಾರ್ ಧ್ವನಿವರ್ಧಕ ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿದರು.

ಶಾಲೆಗಳಿಗೆ ಬುಧವಾರ ಭೇಟಿ ನೀಡಿದ ಅವರು, ಸಾಮಗ್ರಿಗಳನ್ನು ವಿತರಿಸಿದರು. ಈ ವೇಳೆ ಹಿರಿಯ ಹೋರಾಟಗಾರ ವೆಂಕಟರಮಣಸ್ವಾಮಿ(ಪಾಪು) ಮಾತನಾಡಿ, ಗ್ರಾಮೀಣ ಪ್ರದೇಶ, ಕಾಡು, ಬೆಟ್ಟಗುಡ್ಡಗಳಲ್ಲಿರುವ ಶಾಲೆಗಳಲ್ಲಿ ನೈಜ ಶಿಕ್ಷಣ ದೊರೆಯುತ್ತದೆ. ನೈಜ ಪ್ರತಿಭೆಯ ದರ್ಶನವಾಗುತ್ತದೆ. ಹೀಗಾಗಿ ಪ್ರತಿಭೆ ಹುಟ್ಟುವುದೇ ಗ್ರಾಮೀಣ ಭಾಗದಿಂದ ಎಂದರು.

ವಿದ್ಯಾರ್ಥಿಗಳು ಚೆನ್ನಾಗಿ ಓದಿ ಶಾಲೆಗೆ ಕೀರ್ತಿ ತರಬೇಕು. ಕಾಡಿನೊಳಗಿರುವ ಹಳ್ಳಿಗೆ ಶಿಕ್ಷಕರು ಬಂದು ಪಾಠ ಮಾಡುವುದೇ ಕಷ್ಟದ ಕೆಲಸ. ಧ್ವನಿ ವರ್ಧಕವನ್ನು ವಿತರಣೆ ಮಾಡಲು ಒಂದು ದಿನ ಈ ರಸ್ತೆಯಲ್ಲಿ ಬಂದಿದ್ದಕ್ಕೆ ಕಷ್ಟವಾಯಿತು. ಹೀಗಿರುವಾಗ ಶಿಕ್ಷಕರು ದಿನನಿತ್ಯ ಓಡಾಡುತ್ತಿದ್ದಾರೆ. ಶಿಕ್ಷಕರ ಶ್ರಮಕ್ಕೆ ಧನ್ಯವಾದ ಹೇಳಲೇಬೇಕು. ಇಂತಹ ಶಾಲೆಗೆ ಕೊಡುಗೆ ನೀಡುತ್ತಿರುವ ಸಮಾಜ ಸೇವಕ ಸುರೇಶ್‌ಗೌಡ ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು.

ಮುಖ್ಯಶಿಕ್ಷಕ ಮಹೇಂದ್ರ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಶಾಲಾ ವಿದ್ಯಾರ್ಥಿಗಳ ಪತ್ರಕ್ಕೆ ಸ್ಪಂದಿಸುತ್ತಾರೆ ಎಂದು ತಿಳಿದಿದ್ದೇನೆ. ಆದ್ದರಿಂದ ಮುಂದಿನ ದಿನಗಳಲ್ಲಿ ಮಕ್ಕಳಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಸಲು ತೀರ್ಮಾನಿಸಿದ್ದೇನೆ ಎಂದು ಹೇಳಿದರು.ಸಮಾಜ ಸೇವಕ ರವಿ ಸಂತು ಮಾತನಾಡಿ, ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ಮುಂದಿನ ಒಂದು ವಾರದೊಳಗೆ ತಲುಪಿಸುತ್ತೇವೆ. ವೆಂಕಟರಮಣಸ್ವಾಮಿ (ಪಾಪು) ಅವರಂತಹ ಸಮಾಜ ಸೇವಕರಿಗೆ ರಾಜಕೀಯ ಅಧಿಕಾರ ಸಿಕ್ಕರೆ ಮತ್ತಷ್ಟು ಉತ್ತಮ ಕಾರ್ಯಗಳನ್ನು ಮಾಡಲಿದ್ದಾರೆ ಎಂದು ತಿಳಿಸಿದರು.

ಸಮಾಜ ಸೇವಕ ಡಾ.ಪರಮೇಶ್ವರಪ್ಪ ಮಾತನಾಡಿ, ಖಾಸಗಿ ಶಾಲೆ, ಸರ್ಕಾರಿ ಶಾಲೆ ಎಂಬ ತಾರತಮ್ಯ ಮಾಡದೆ ಮಕ್ಕಳ ಭವಿಷ್ಯ ಅರಳಬೇಕು. ಶಿಕ್ಷಕರು ಮಕ್ಕಳ ಮೇಲೆ ವಿಶೇಷ ಕಾಳಜಿವಹಿಸಬೇಕು ಎಂದು ಸಲಹೆ ನೀಡಿದರು. ಸಮಾಜ ಸೇವಕ ಸುರೇಶ್ ಗೌಡ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಪ್ರತಿಭಾವಂತ ಶಿಕ್ಷಕರಿರುವುದೇ ಸರ್ಕಾರಿ ಶಾಲೆಗಳಲ್ಲಿ. ಈ ಶಾಲೆಗಳಲ್ಲಿ ಓದಿದ ಮಕ್ಕಳು ಸರ್ಕಾರಿ ಉದ್ಯೋಗ ಪಡೆದುಕೊಂಡಿದ್ದಾರೆ. ಆದ್ದರಿಂದ ಮಕ್ಕಳು ಆಸಕ್ತಿಯಿಂದ ಓದಿ ಉನ್ನತ ಮಟ್ಟಕ್ಕೆ ಬೆಳೆಯಿರಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಕಾಮಗೆರೆ ಗ್ರಾಮದ ಸರ್ಕಾರಿ ಶಾಲೆಗೂ ಧ್ವನಿವರ್ಧಕ ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.

ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ಅಧ್ಯಕ್ಷ ಶಿವು, ಮುಖ್ಯಶಿಕ್ಷಕಿ ಕಮಲಮ್ಮ, ಶಿಕ್ಷಕಿಯರಾದ ಕಮಲಮ್ಮ, ಜಯಮ್ಮ ಮತ್ತು ವಿದ್ಯಾರ್ಥಿಗಳು ಇದ್ದರು.

ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಗಲಿ. ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯವನ್ನು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದರೆ ಸರ್ಕಾರಿ ಶಾಲೆಗೆ ಸೇರುತ್ತಾರೆ.-ಸುಧಾ ಶಿವಕುಮಾರ್, ಸಮಾಜ ಸೇವಕಿ, ನಂಜನಗೂಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net