ಬೆಂಗಳೂರು: ಚಾಮರಾಜನಗರ ಆಕ್ಸಿಜನ್ ದುರಂತ (Chamarajanagar Oxygen Tragedy)ಪ್ರಕರಣ ತನಿಖೆ ಮಾಡುವಂತೆ ನ್ಯಾ.ಕುನ್ಹಾ ಕಮಿಟಿಗೆ ಸೂಚಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundurao) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ನಡೆದ ದುರಂತ ಸಾವಿನ ಬಗ್ಗೆ ನ್ಯಾ.ಕುನ್ಹಾ ಕಮಿಟಿಯೇ ತನಿಖೆ ಮಾಡಬೇಕು. ಅವರು ಮಾಡುತ್ತಾರೋ ಹೇಗೆ ನೋಡಬೇಕು. ಆದರೆ, ನಾವು ಆ ಕುರಿತು ತನಿಖೆ ಮಾಡುವಂತೆ ಸೂಚಿಸುತ್ತೇವೆ ಎಂದರು.
ಕೋವಿಡ್ ಹಗರಣದ ವರದಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಶ್ರೀರಾಮುಲು ಮೇಲೆ ಗಂಭೀರ ಆರೋಪ ಬಂದಿದೆ. ಹಾಗಾಗಿ ಅವರು ಚುನಾವಣಾ ಪ್ರಚಾರದಿಂದ ಹೊರಗಿರಬೇಕು. ನ್ಯಾ.ಕುನ್ಹಾ ವರದಿ ಆಧರಿಸಿ ಎಸ್ ಐಟಿ ಮಾಡಬೇಕೆ? ಪೊಲೀಸ್ ಠಾಣೆಯಲ್ಲಿ ಎ್ಐಆರ್ ಮಾಡಬೇಕೆ? ಎಂಬ ಬಗ್ಗೆ ಸಂಪುಟ ಉಪಸಮಿತಿಯಲ್ಲಿ ಚರ್ಚಿಸುತ್ತೇವೆ ಎಂದು ಹೇಳಿದರು.
ನ್ಯಾ.ಕುನ್ಹಾ ಅವರ ಕಮಿಟಿ ಸಾವಿರ ಪುಟಗಳ ವರದಿ ಕೊಟ್ಟಿದೆ. ನಮ್ಮ ಉಪ ಸಮಿತಿ ಪರಿಶೀಲನೆ ಮಾಡುತ್ತಿದೆ. ಇದು ವೈಯುಕ್ತಿಕ ವಿಚಾರಣೆ ಏನಲ್ಲ. ನಾವು ವಿರೋಧ ಪಕ್ಷದಲ್ಲಿದ್ದಾಗ ಆರೋಪ ಮಾಡಿದ್ದೆವು. ನಮ್ಮ ಪಕ್ಷದಿಂದ ತನಿಖೆ ಮಾಡಿ ವರದಿ ಕೊಟ್ಟಿದ್ದೆವು. ಆ ವರದಿ ಸರ್ಕಾರಕ್ಕೆ ಒಪ್ಪಿಸಿದ್ದೆವು. ನಿಯಮ ಬದಿಗೊತ್ತಿ ನಿರ್ಧಾರ ಮಾಡಿದರು. ನಾವು ಅಧಿಕಾರಕ್ಕೆ ಬಂದ ಮೇಲೆ ತನಿಖೆಗೆ ಕೊಟ್ಟಿದ್ದೆವು. ಈಗ ಮಧ್ಯಂತರ ವರದಿ ಕೊಟ್ಟಿದ್ದಾರೆ. ಅಂತಿಮ ವರದಿಯನ್ನೂ ಕೊಡುತ್ತಾರೆ ಎಂದು ತಿಳಿಸಿದರು.
14 ಕೋಟಿ ಹೆಚ್ಚು ಪಾವತಿ ಮಾಡಿದ್ದಾರೆ
ಪಿಪಿಇ ಕಿಟ್ ಖರೀದಿಯಲ್ಲಿ 14 ಕೋಟಿ ರೂ.ವೆಚ್ಚ ಮಾಡಿದ್ದಾರೆ. ದೇಶದಲ್ಲಿ ಪಿಪಿಇ ಕಿಟ್ ಖರೀದಿಗೆ ಅವಕಾಶ ಇತ್ತು. ಆದರೆ ಬಿಜೆಪಿಯವರು ಹಾಂಕ್‌ಕಾಂಗ್‌ನಿಂದ ತರಿಸಿದ್ದಾರೆ. 14 ಕೋಟಿ ಹೆಚ್ಚು ಹಣ ಕಂಪನಿಗೆ ತೆತ್ತಿದ್ದಾರೆ. ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಶಿಾರಸು ಮಾಡಿದ್ದಾರೆ. ಈಗ ಪ್ರಾಸಿಕ್ಯೂಶನ್ ಮಾಡಲು ವರದಿ ಶಿಾರಸು ಮಾಡಿದೆ.
ಇನ್ನು ಬೇಕಾದಷ್ಟು ಆರೋಪಗಳಿವೆ. ವೆಂಟಿಲೇಟರ್, ಬೇರೆ ಬೇರೆ ಖರೀದಿ ಮಾಡಿದ್ದಾರೆ. ಹೇಗೆ ತನಿಖೆ ಮಾಡಬೇಕು ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಹೆಣದ ಮೇಲೆ ಹಣ ಮಾಡಿದರು
ಕೋವಿಡ್ ಸಂದರ್ಭದಲ್ಲಿ ಇಬ್ಬರು ಆರೋಗ್ಯ ಸಚಿವರು ಇದ್ದರು. ಹೆಣದ ಮೇಲೆ ಹಣ ಮಾಡಿದರು. ಹೆಚ್ಚಿನ ಬೆಲೆಗೆ ಖರೀದಿ ಮಾಡಿದರು. ಅವರ ಅವಧಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಕೀಳು ಮಟ್ಟದ ಅಧಿಕಾರ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಿಂದಿನ ಸರ್ಕಾರದಲ್ಲಿ ಲೂಟಿ ಸ್ಪಷ್ಟ
ಹಿಂದಿನ ಸರ್ಕಾರದಲ್ಲಿ ಲೂಟಿ ಮಾಡಿರುವುದು ಬಹಳ ಸ್ಪಷ್ಟ. ಸಿಎಂ, ಸಚಿವರು ಭಾಗಿಯಾಗಿರೋದು ಸ್ಪಷ್ಟ. ಹಣ ರಿಕವರಿ ಬಗ್ಗೆ ಕಮಿಟಿ ಶಿಫಾರಸು ಮಾಡಿದೆ. ಗುಣಮಟ್ಟದ ಇಲ್ಲದ ವಸ್ತು ಪಡೆದಿರುವ ಉಲ್ಲೇಖವಿದೆ. ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅವರಿಗೆ ನೊಟೀಸ್ ಕೊಟ್ಟು ಉತ್ತರ ಪಡೆಯಬೇಕು. ಅಧಿಕಾರಿ, ಮಂತ್ರಿಗಳೇ ಇರಬಹುದು. ಈ ಹಗರಣ ವ್ಯಾಪಕವಾಗಿದ್ದು, ನಾವು ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಿದೆ ಎಂದರು.
ಕೃತಕ ಬಣ್ಣ ಪರಿಶೀಲನೆ
ಕೇರಳ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣ ವಿಚಾರ ಕುರಿತ ಪ್ರಶ್ನೆಗೆ, ಕೇರಳದಲ್ಲೂ ಇದರ ಬಗ್ಗೆ ನೋಡುತ್ತಾರೆ. ನಾವು ಚೆಕ್‌ಪೋಸ್ಟ್ ಗಳಲ್ಲಿ ಪರಿಶೀಲನೆ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಉತ್ತರಿಸಿದರು.