ಇಂದೋರ್: ಸುಧಾರಿತ ನಿರ್ವಹಣೆಯೊಂದಿಗೆ ಸತತ 2 ಗೆಲುವು ದಾಖಲಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಮಂಗಳವಾರ ಬಲಿಷ್ಠ ಬರೋಡ ತಂಡದ ಎದುರು ಕಣಕ್ಕಿಳಿಯಲಿದೆ. ಇಂದೋರ್‌ನ ಎಮರಾಲ್ಡ್ ಹೈಟ್ಸ್ ಹೈಸ್ಕೂಲ್ ಗ್ರೌಂಡ್‌ನಲ್ಲಿ ನಡೆಯಲಿರುವ ಪಂದ್ಯದ ಟೂರ್ನಿಯ ನಾಕೌಟ್ ಆಸೆ ಜೀವಂತವಿರಿಸಲು ಮಯಾಂಕ್ ಅಗರ್ವಾಲ್ ಬಳಗಕ್ಕೆ ಮಾಡು ಇಲ್ಲವೆ ಮಡಿ ಪಂದ್ಯ ಎನಿಸಿದೆ.
ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 3 ಗೆಲುವು, 2 ಸೋಲಿನೊಂದಿಗೆ 12 ಅಂಕ ಸಂಪಾದಿಸಿರುವ ಕರ್ನಾಟಕ ತಂಡ ಬಿ ಗುಂಪಿನ 4ನೇ ಸ್ಥಾನದಲ್ಲಿದೆ. ಆದರೆ ಇತರ ಎಲ್ಲ ತಂಡಗಳಿಗಿಂತ ಅತ್ಯುತ್ತಮ ರನ್‌ರೇಟ್ +2.193 ಹೊಂದಿದೆ. ಆರ್‌ಸಿಬಿ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಆಲ್ರೌಂಡರ್ ಕೃನಾಲ್ ಪಾಂಡ್ಯ ನೇತೃತ್ವದ ಬರೋಡ ತಂಡ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 1 ಸೋಲಿನೊಂದಿಗೆ 16 ಅಂಕ ಕಲೆಹಾಕಿ 3ನೇ ಸ್ಥಾನದಲ್ಲಿದೆ. ಹಿಂದಿನ ಪಂದ್ಯದಲ್ಲಿ ಸೌರಾಷ್ಟ್ರ ಎದುರು ಪರಾಭವಗೊಂಡಿರುವ ಹಿನ್ನಡೆ ಎದುರಿಸುತ್ತಿದೆ.
ಆರಂಭಿಕ ಪಂದ್ಯಗಳಲ್ಲಿ ಸಾಧಾರಣ ನಿರ್ವಹಣೆ ತೋರಿದ ಕರ್ನಾಟಕ ತಂಡ ಬಳಿಕ ಪುಟಿದೇಳುವ ಮೂಲಕ ಹಿಂದಿನ ಎರಡು ಪಂದ್ಯಗಳಲ್ಲಿ ಸಿಕ್ಕಿಂ, ತಮಿಳುನಾಡು ವಿರುದ್ಧ ಭರ್ಜರಿ ಗೆಲುವಿನೊಂದಿಗೆ ನಾಕೌಟ್ ಆಸೆ ಜೀವಂತವಿರಿಸಿದೆ. ಮಯಾಂಕ್ ಅಗರ್ವಾಲ್ ಅಸ್ಥಿರ ನಿರ್ವಹಣೆ ತಂಡಕ್ಕೆ ಪ್ರಮುಖ ಹಿನ್ನಡೆ ಎನಿಸಿದೆ. ಆರಂಭಿಕನಾಗಿ ಬಡ್ತಿ ಪಡೆದಿರುವ ಅನುಭವಿ ಮನೀಷ್ ಪಾಂಡೆ ಕಡಿಮೆ ಮೊತ್ತದ ಚೇಸಿಂಗ್‌ನಲ್ಲೂ ಬಿರುಸಿನಾಟದೊಂದಿಗೆ ಗಮನಸೆಳೆದಿದ್ದಾರೆ. ಯುವ ಆಟಗಾರರಾದ ಕೆಎಲ್ ಶ್ರೀಜಿತ್, ಆರ್.ಸ್ಮರಣ್ ಜತೆಗೆ ಮನೋಜ್ ಭಾಂಡಗೆ ಭರವಸೆ ಮೂಡಿಸಿದ್ದಾರೆ. ವಾಸುಕಿ ಕೌಶಿಕ್, ವೈಶಾಕ್ ವಿಜಯ್ ಕುಮಾರ್ ಜತೆಯಾಗಿ ಶ್ರೇಯಸ್ ಗೋಪಾಲ್ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಆದರೆ ಪಾಂಡ್ಯ ಸಹೋದರರ ಜೋಡಿ ರಾಜ್ಯ ಬೌಲಿಂಗ್ ವಿಭಾಗಕ್ಕೆ ಕಠಿಣ ಸವಾಲು ಎನಿಸಿದೆ.
ಸೌರಾಷ್ಟ್ರದ ವಿರುದ್ಧದ 78 ರನ್‌ಗಳ ಸೋಲಿನೊಂದಿಗೆ ಅಗ್ರಸ್ಥಾನದಿಂದ ಕುಸಿದಿರುವ ಬರೋಡ ಜಯದ ಹಳಿಗೆ ಮರಳುವ ವಿಶ್ವಾಸದಲ್ಲಿದೆ. ಟೂರ್ನಿಯಲ್ಲಿ ಗರಿಷ್ಠ 20 ಸಿಕ್ಸರ್ ಬಾರಿಸಿರುವ ಹಾರ್ದಿಕ್ ಪಾಂಡ್ಯ ಭರ್ಜರಿ ಾರ್ಮ್‌ನಲ್ಲಿದ್ದಾರೆ. ವೈಯಕ್ತಿಕ ಕಾರಣದಿಂದ ಹಿಂದಿನ ಪಂದ್ಯ ತಪ್ಪಿಸಿಕೊಂಡಿದ್ದರು. ಕರ್ನಾಟಕ ಎದುರಿನ ಪಂದ್ಯಕ್ಕೂ ಅಲಭ್ಯರಾದರೆ ಮಯಾಂಕ್ ಬಳಗಕ್ಕೆ ಪ್ಲಸ್ ಪಾಯಿಂಟ್ ಎನಿಸಲಿದೆ.
ಆರಂಭ: ಮಧ್ಯಾಹ್ನ 1.30
ನಾಕೌಟ್ ಹಾದಿ
ಕರ್ನಾಟಕ ತಂಡ ನಾಕೌಟ್ ರೇಸ್‌ನಲ್ಲಿ ಉಳಿಯಲು ಗೆಲುವು ಅನಿವಾರ‌್ಯ. ಗುಂಪಿನ ಅಗ್ರ 2 ತಂಡಗಳು ಮಾತ್ರ ನಾಕೌಟ್‌ಗೇರಲಿದ್ದು,ಸದ್ಯ ಸೌರಾಷ್ಟ್ರ, ಗುಜರಾತ್ ತಲಾ 16 ಅಂಕದೊಂದಿಗೆ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ. ದಿನದ ಇತರ ಪಂದ್ಯಗಳಲ್ಲಿ ಸೌರಾಷ್ಟ ತಂಡ ತಮಿಳುನಾಡು ಎದುರು, ಗುಜರಾತ್ ತಂಡ ಉತ್ತರಾಖಂಡ ವಿರುದ್ಧ ಸೆಣಸಲಿವೆ. ಇವರೆಡೂ ತಂಡಗಳು ಸೋತು, ಕರ್ನಾಟಕ ಗೆದ್ದರೆ ನಾಕೌಟ್ ಹಾದಿ ಸುಗಮ ಎನಿಸಲಿದೆ. ಮಯಾಂಕ್ ಪಡೆ ಬರೋಡ ಎದುರು ಗೆದ್ದು, ಕೊನೇ ಲೀಗ್ ಪಂದ್ಯದಲ್ಲೂ ಜಯ ಸಾಧಿಸಿದರೆ ಕನಿಷ್ಠ ಪ್ರಿ ಕ್ವಾರ್ಟರ್‌ೈನಲ್‌ನ ರೇಸ್‌ನಲ್ಲಿ ಉಳಿಯಲಿದೆ. ತಮಿಳುನಾಡು ಈಗಾಗಲೆ ನಾಕೌಟ್ ರೇಸ್‌ನಿಂದ ಹೊರಬಿದ್ದಿದೆ.