ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ರೀಡಾ ಪ್ರತಿಭೆ ಚೈತನ್ಯಾ

25
Published on

ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ 9ನೇ ತರಗತಿ ವಿದ್ಯಾರ್ಥಿನಿ ಚೈತನ್ಯಾ ಎಂ.ಡಿ. ಥ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ.

ತಂಡವು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಚೈತನ್ಯಾ ಪಂದ್ಯಾಟದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ರಾಷ್ಟ್ರಮಟ್ಟದ ಕ್ರೀಡಾ ಪ್ರತಿಭೆಯನ್ನು ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಸಂಚಾಲಕ ಸುದರ್ಶನ ಜೋಯೀಸ ಅಭಿನಂದಿಸಿದ್ದಾರೆ.

ಕೊಂಬಾರು ಗ್ರಾಮದ ಡಮ್ಮಡ್ಕ ಮೋಹನಾನಂದ, ನೇತ್ರಾವತಿ ದಂಪತಿಯ ಪುತ್ರಿ ಚೈತನ್ಯಾ ಡಿ.ಎಂ. ಛತ್ತೀಸ್‌ಗಢದ ಭಿಲಾಯಿನಲ್ಲಿ ನಡೆದ 32ನೇ ಸಬ್ ಜೂನಿಯರ್ ವಿಭಾಗದ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದು, ಈ ಪಂದ್ಯ ಕೂಟದಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಮುಂಬೈ, ಪಶ್ಚಿಮ ಬಂಗಾಳ, ತೆಲಂಗಾಣವನ್ನು ಸೋಲಿಸಿ, ಸೆಮಿ ಫೈನಲ್‌ನಲ್ಲಿ ಹರಿಯಾಣವನ್ನು ಮಣಿಸಿ ಕರ್ನಾಟಕ ತಂಡ ಫೈನಲ್ ಪ್ರವೇಶಿಸಿತು. ಪೈನಲ್‌ನಲ್ಲಿ ಜಾಖರ್ಂಡ್ ಅನ್ನು ಸೋಲಿಸಿ ಕರ್ನಾಟಕ ಚಾಂಪಿಯನ್ ಆಯಿತು. ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಪಟ್ಟೆ, ಅಂತಾರಾಷ್ಟ್ರೀಯ ಥ್ರೋಬಾಲ್ ಕ್ರೀಡಾಪಟು, ದೈಹಿಕ ಶಿಕ್ಷಣ ಶಿಕ್ಷಕಿ ಪೂರ್ಣಿಮಾ ಪಿ, ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ವಿನಯ ಕೆ.ಮಾರ್ಗದರ್ಶನ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net