ದೇಶದಲ್ಲಿ ಚೀನಾ ವಸ್ತು ಸುಸ್ತು; ಒಂದು ವರ್ಷದ ಅವಧಿಯಲ್ಲಿ ಶೇ.67 ಬೇಡಿಕೆ ಕುಸಿತ

dfgdfgwer
Published on

|ಸತೀಶ್ ಕಂದಗಲ್​ಪುರ ಬೆಂಗಳೂರು

ಗೂಡಂಗಡಿಗಳಿಂದ ಹಿಡಿದು ಬಜಾರ್, ಮಾರುಕಟ್ಟೆಗಳವರೆಗೆ ಎಲ್ಲೆಲ್ಲೂ ಆಕ್ರಮಿಸಿದ್ದ ಚೀನಾ ವಸ್ತುಗಳ ಅಬ್ಬರ ಈಗ ತಗ್ಗಿದೆ. 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ -ಚೀನಾ ಯೋಧರ ಸಂಘರ್ಷ, ಕೋವಿಡ್ ಲಾಕ್​ಡೌನ್ ನಂತರದ ಒಂದು ವರ್ಷದಲ್ಲಿ ದೇಶದಲ್ಲಿ ಸುಮಾರು ಶೇ.67 ಜನರು ಮೇಡ್ ಚೀನಾ ವಸ್ತುಗಳ ಖರೀದಿಯಿಂದ ಹಿಂದೆ ಸರಿದಿದ್ದಾರೆ. ಇನ್ನೊಂದೆಡೆ, ಆತ್ಮನಿರ್ಭರ ಭಾರತ ಹಾಗೂ ಮೇಡ್ ಇನ್ ಇಂಡಿಯಾ ಯೋಜನೆಗಳು ಯಶಸ್ಸಿನತ್ತ ದಾಪುಗಾಲಿಟ್ಟಿವೆ.

ಎಲೆಕ್ಟ್ರಾನಿಕ್ಸ್ ವಸ್ತುಗಳು, ಸ್ಮಾರ್ಟ್​ಫೋನ್, ರಾಸಾಯನಿಕ, ಆಟಿಕೆಗಳು, ಟ್ಯಾಬ್ಲೆಟ್, ಗ್ಯಾಜೆಟ್ಸ್, ಔಷಧ ಇತ್ಯಾದಿ ಶೇ.60ಕ್ಕೂ ಅಧಿಕ ವಸ್ತುಗಳನ್ನು ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಚೀನಾ ಕರೊನಾ ಹಾಟ್​ಸ್ಪಾಟ್ ಎಂಬ ಸುದ್ದಿ ಬಹಿರಂಗಗೊಂಡ ಬಳಿಕ ಚೀನಾ ವಸ್ತುಗಳ ಖರೀದಿಗೆ ಭಾರಿ ಹಿನ್ನಡೆಯಾಗಿದೆ. ಚೀನಾದಿಂದ ಆಮದಾಗುತ್ತಿದ್ದ ಎಲೆಕ್ಟ್ರಾನಿಕ್ಸ್ ಉಪಕರಣಗಳ ಪ್ರಮಾಣ ಕಡಿಮೆಯಾಗಿದೆ. ಕೆಲ ವಸ್ತುಗಳ ಶೇ.30 ಬಿಡಿಭಾಗಗಳನ್ನಷ್ಟೇ ತರಿಸಿಕೊಳ್ಳಲಾಗುತ್ತಿದೆ. ಫ್ಯಾನ್, ಮಿಕ್ಸಿ, ಟಿವಿ, ಬಲ್ಬ್ ಹಾಗೂ ಆಟಿಕೆಗಳ ಉತ್ಪಾದನೆ ಭಾರತದಲ್ಲೇ ಹೆಚ್ಚಾಗಿದೆ. ಗಾರ್ವೆಂಟ್ಸ್ ಉತ್ಪನ್ನಗಳ ಆಮದು ಶೇ.1 ಹಾಗೂ ಟೆಕ್ಸ್​ಟೈಲ್ಸ್ ಉತ್ಪನ್ನಗಳ ಆಮದು ಶೇ.10ಕ್ಕಿಂತ ಕಡಿಮೆಯಾಗಿದೆ.

ಗಲ್ವಾನ್ ಸಂಘರ್ಷದ ಬಳಿಕ ಭಾರತೀಯರಿಗೆ ಚೀನಾದ ಮೇಲೆ ದ್ವೇಷ ಹೆಚ್ಚಾಗಿದೆ. ಇದರಿಂದಾಗಿಯೇ ವರ್ಷದಲ್ಲಿ ಶೇ.39 ಭಾರತೀಯ ಕುಟುಂಬಗಳು ಚೀನಾ ವಸ್ತುಗಳನ್ನು ಖರೀದಿಸುವುದಾಗಲಿ, ಬಳಸುವುದಾಗಲಿ ಮಾಡಿಲ್ಲ ಎಂಬ ವಿಚಾರ ಖಾಸಗಿ ಸಂಸ್ಥೆಯೊಂದು ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ದೃಢಪಟ್ಟಿದೆ.

ಅಂತಾರಾಷ್ಟ್ರೀಯವಾಗಿ ಸರಕು ಸಾಗಣೆಗೆ ಕಂಟೇನರ್​ಗಳ ಸಮಸ್ಯೆ ಕಂಡುಬಂದಿದೆ. ಚೀನಾದಲ್ಲಿ ಉತ್ಪಾದನೆ ಕೊರತೆ ಮತ್ತು ಆಮದು ಬೆಲೆಗಳ ಹೆಚ್ಚಳದಿಂದ ಸ್ಥಳೀಯವಾಗಿ ಉತ್ಪಾದನೆ ಆಗುವ ವಸ್ತುಗಳಿಗೆ ಬೇಡಿಕೆ ಬಂದಿದೆ. ಆತ್ಮ ನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗಳು ಸದುಪಯೋಗ ಆಗುತ್ತಿವೆ.

| ಡಾ. ರಾಜು ಕರ್ನಾಟಕ ರಾಜ್ಯ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷ ಬೇಡಿಕೆ ಇದ್ದವು

  •   ಮೊಬೈಲ್ ಫೋನ್, ಟ್ಯಾಬ್ಲೆಟ್, ಸ್ಮಾರ್ಟ್​ವಾಚ್, ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳು
  •   ಫೆಸ್ಟಿವಲ್ ಲೈಟಿಂಗ್ಸ್, ಲ್ಯಾಂಪ್​ಗಳು, ಕ್ಯಾಂಡಲ್ಸ್, ಚಪ್ಪಲಿ, ಬ್ಯಾಗ್​ಗಳು
  •   ವಾಹನಗಳ ಬಿಡಿಭಾಗ, ಆಟಿಕೆಗಳು ಹಾಗೂ ಗಿಫ್ಟ್ ಐಟಂಗಳು

ಕಾರಣಗಳೇನು?

  •  ಚೀನಾದಲ್ಲಿ ಉತ್ಪಾದನೆ ಕೊರತೆಯಾಗಿ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ
  •   ಕೇಂದ್ರದ ಯೋಜನೆಗಳಿಂದ ಸ್ಥಳೀಯವಾಗಿ ಉತ್ಪನ್ನಗಳ ಉತ್ಪಾದನೆ ಹೆಚ್ಚಳ
  •   ದೇಶಿ ವಸ್ತುಗಳ ಖರೀದಿಗೆ ಸಾರ್ವಜನಿಕರ ಆದ್ಯತೆ

ವ್ಯಾಪಕ ಅಭಿಯಾನ

ಚೀನಾ ಪ್ರಾಡಕ್ಟ್ ಬ್ಯಾನ್ ಕ್ಯಾಂಪೇನ್, ಬಾಯ್ಕಾಟ್ ಚೀನಾ ಹ್ಯಾಷ್​ಟ್ಯಾಗ್ ಹೀಗೆ ಬೇರೆಬೇರೆ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನ ನಡೆದಿತ್ತು. ಕೇಂದ್ರ ಸರ್ಕಾರ ಕೆಲ ಚೀನಾ ಆಪ್​ಗಳನ್ನು ನಿಷೇಧಿಸಿತ್ತು. ಚೀನಾ ವಸ್ತುಗಳನ್ನು ಖರೀದಿಸಬಾರದು ಎಂದು ಚಲನಚಿತ್ರ ನಟ-ನಟಿಯರೂ ಜಾಗೃತಿ ಮೂಡಿಸಿದ್ದರು.

ಕೈಹಿಡಿದ ಆತ್ಮನಿರ್ಭರ

  1.  ಗಲ್ವಾನ್ ಘರ್ಷಣೆ ಮೊದಲು ಭಾರತೀಯ ಮಾರುಕಟ್ಟೆ ಮೇಡ್-ಇನ್-ಚೀನಾ ಉತ್ಪನ್ನಗಳಿಂದ ತುಂಬಿತ್ತು
  2.   2020ರ ಲಾಕ್​ಡೌನ್ ನಂತರ ದೇಶದಲ್ಲಿ ಆರ್ಥಿಕ ಚೇತರಿಕೆಗೆ ‘ಆತ್ಮನಿರ್ಭರ ಭಾರತ’ ಯೋಜನೆಗೆ ಚಾಲನೆ
  3.   ಆತ್ಮ ನಿರ್ಭರ ಭಾರತ ಅಭಿಯಾನದಿಂದ ಸ್ಥಳೀಯವಾಗಿ ವಸ್ತುಗಳ ಉತ್ಪಾದನೆ, ಫೋನ್ ತಯಾರಿಕೆ ಮತ್ತು ಇತರ ಉತ್ಪನ್ನಗಳ ಜೋಡಣೆ (ಮೇಕ್ ಇನ್ ಇಂಡಿಯಾಗೆ)ಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದೆ
  4.   ಚೀನಾದ ಪ್ರಮುಖ ಆಮದುಗಳಾದ ಆಟೋಮೊಬೈಲ್ಸ್, ಸ್ಮಾರ್ಟ್ ಫೋನ್​ಗಳು, ಟೆಲಿಕಾಂ ಮತ್ತು ವಿದ್ಯುತ್ ಉಪಕರಣಗಳು, ರಾಸಾಯನಿಕಗಳು, ರಸಗೊಬ್ಬರಗಳ ಮೇಲಿನ ಅತಿಯಾದ ಅವಲಂಬನೆ ತಗ್ಗಿದೆ
  5.   ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಸರಕುಗಳು ಹಾಗೂ ಬಿಡಿ ಭಾಗಗಳ ಆಮದು ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ.

 ಆಮದು ತೀವ್ರ ಇಳಿಕೆ: ಕೆಲವು ಸ್ಮಾರ್ಟ್ ಡಿವೈಸ್, ಬಿಡಿ ಭಾಗಗಳು, ರಾಸಾಯನಿಕ, ಔಷಧ ಇತ್ಯಾದಿ ಕೆಲವು ವಸ್ತುಗಳ ಮೇಲೆ ಭಾರತವು ಚೀನಾ ಮೇಲೆ ಅವಲಂಬಿತವಾಗಿದೆ. 2010 ರಿಂದ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಚೀನಾ ಹೊರಹೊಮ್ಮಿದೆ. 2021ರಲ್ಲಿ ಚೀನಾ ಮತ್ತು ಭಾರತದ ನಡುವಿನ ಒಟ್ಟು ವ್ಯಾಪಾರವು 125.66 ಶತಕೋಟಿ ಡಾಲರ್ ಆಗಿದೆ. ಇದು 2020ಕ್ಕೆ ಹೋಲಿಕೆ ಮಾಡಿದಲ್ಲಿ ಶೇ.40 ಅಧಿಕವಾಗಿದೆ. ಆದರೆ, 2017-18ರಲ್ಲಿ ಚೀನಾದಿಂದ ಆಮದು ಮಾಡಿಕೊಂಡ ವಸ್ತುಗಳಿಗಿಂತ ತೀವ್ರ ಕಡಿಮೆಯಾಗಿದೆ ಎಂದು ದತ್ತಾಂಶದಿಂದ ವ್ಯಕ್ತವಾಗುತ್ತದೆ. ಚೀನಾದ ವಸ್ತುಗಳಿಗೆ ಬೆಲೆ ಮತ್ತು ಆಮದು ವೆಚ್ಚಗಳು ಹೆಚ್ಚಳವಾಗಿದ್ದು ಕಡಿಮೆ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಹೆಚ್ಚಿನ ಹಣ ಪಾವತಿಯಾಗುತ್ತಿದೆ ಎಂಬ ಅಂಶ ಬಹಿರಂಗವಾಗುತ್ತದೆ.

ಅಪ್ಪಳಿಸಿದ 4ನೇ ಅಲೆ: ಪ್ರಸ್ತುತ ಚೀನಾದಲ್ಲಿ ಕೋವಿಡ್ 4ನೇ ಅಲೆ ಆರಂಭವಾಗಿದ್ದು, ಕೆಲವು ನಗರಗಳನ್ನು ಲಾಕ್​ಡೌನ್ ಮತ್ತು ಸೆಮಿ ಲಾಕ್​ಡೌನ್ ಮಾಡಲಾಗಿದೆ. ಹೀಗಾಗಿ, ಚೀನಾ ಉತ್ಪಾದಿತ ವಸ್ತುಗಳ ಖರೀದಿಗೆ ಮತ್ತಷ್ಟು ಹಿನ್ನಡೆಯಾಗಿದ್ದರೂ, ಇದು ನೇರವಾಗಿ ಪರಿಣಾಮ ಬೀರುವುದಿಲ್ಲ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.

ಲೋಕಲ್ ಸರ್ಕಲ್ಸ್ ಸಂಸ್ಥೆ ಸಮೀಕ್ಷೆ: ಲೋಕಲ್ ಸರ್ಕಲ್ಸ್ ಸಂಸ್ಥೆಯು ದೇಶದ 309 ಜಿಲ್ಲೆಗಳಲ್ಲಿ ನೆಲೆಸಿರುವ, ಚೀನಾದ ವಸ್ತುಗಳನ್ನು ಖರೀದಿಸುವ 27,000 ಗ್ರಾಹಕರಿಂದ ಅಭಿಪ್ರಾಯ ಸಂಗ್ರಹಿಸಿದೆ. ಇವರಲ್ಲಿ ಶೇ.66 ಪುರುಷರು ಮತ್ತು ಶೇ.34 ಮಹಿಳೆಯರಾಗಿದ್ದಾರೆ. ಶ್ರೇಣಿ-1 ನಗರಗಳಲ್ಲಿ ಶೇ.48 ಮತ್ತು ಉಳಿದ ಅಭಿಪ್ರಾಯಗಳನ್ನು ಶ್ರೇಣಿ-2 ರಿಂದ ಶ್ರೇಣಿ-4 ನಗರ ಪಟ್ಟಣಗಳಲ್ಲಿ ನಡೆಸಲಾಗಿದೆ.

ಮೂರ್ನಾಲ್ಕು ವರ್ಷಗಳ ಹಿಂದೆ ರೆಡಿಮೇಡ್ ಹಾಗೂ ಪಾಲಿಸ್ಟರ್ ಬಟ್ಟೆ ಚೀನಾದಿಂದ ಹೆಚ್ಚಾಗಿ ಆಮದಾಗುತ್ತಿದ್ದವು. ಕಳೆದೊಂದು ವರ್ಷದಲ್ಲಿ ಗಾಮೆಂಟ್ಸ್ ಉತ್ಪನ್ನಗಳ ಆಮದು ಶೇ.1ಕ್ಕೆ ಹಾಗೂ ಟೆಕ್ಸ್ ಟೈಲ್ಸ್ ಉತ್ಪನ್ನಗಳ ಆಮದು ಶೇ.10ಕ್ಕಿಂತ ಕಡಿಮೆಯಾಗಿದೆ. ಭಾರತದ ಉತ್ಪನ್ನಗಳೇ ರಫ್ತಾಗುತ್ತಿವೆ.

| ಡುಂಗ್ರಾಮಲ್ ಚೋಪ್ರಾ ಕರ್ನಾಟಕ ಹೊಸೈರಿ ಮತ್ತು ಗಾಮೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net