ನಿಗೂಢತೆ ಹುಟ್ಟು ಹಾಕಿದ ಮಹಿಳೆಯ ‘ಚಡ್ಡಿ ಗ್ಯಾಂಗ್’ ಕಟ್ಟು ಕಥೆ : ಹಣ, ಒಡವೆಗಾಗಿ ತಲವಾರು ತೋರಿಸಿ ಬೆದರಿಕೆ ಸುದ್ದಿ ವೈರಲ್

New Project (18)
ಕೆಯ್ಯೂರು ಗ್ರಾಮದ ಸಣಂಗಳದ ಬಾಡಿಗೆ ಮನೆಯೊಂದಕ್ಕೆ ಚಡ್ಡಿ ಗ್ಯಾಂಗ್‌ನವರು ಬಂದು ತಲುವಾರು ತೋರಿಸಿ ಹಣ, ಒಡವೆ ಕೇಳಿದ್ದಾರೆ ಎಂದು ಪ್ರಚಾರವಾದ ಹಿನ್ನಲೆಯಲ್ಲಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Published on

ಪುತ್ತೂರು ಗ್ರಾಮಾಂತರ : ಕುಖ್ಯಾತ ‘ಚಡ್ಡಿ ಗ್ಯಾಂಗ್’ ದರೋಡೆಕೋರರ ಹೋಲುವ ರೀತಿಯ ಪೋಟೋ ಬಳಸಿಕೊಂಡು, ಮಂಗಳವಾರ ರಾತ್ರಿ ಸುಮಾರು 8.30ರ ವೇಳೆಗೆ ನನ್ನ ಮನೆಗೆ ನಾಲ್ಕು ಮಂದಿ ಇದ್ದ ‘ಚಡ್ಡಿ ಗ್ಯಾಂಗ್’ ದರೋಡೆಕೋರರು ಬಂದಿದ್ದಾರೆ. ತಲವಾರು ತೋರಿಸಿ ಬೆದರಿಸಿ, ಹಣ, ಒಡವೆ ಕೇಳಿದ್ದಾರೆ. ನಾನು ಕಿಟಕಿಯ ಮೂಲಕ ಅವರ ಫೋಟೋ ತೆಗೆದಿದ್ದೇನೆ ಎಂದು ಕುಖ್ಯಾತ ಚಡ್ಡಿ ಗ್ಯಾಂಗ್ ದರೋಡೆಕೋರರೇ ಬಂದಿದ್ದಾರೆ ಎನ್ನುವ ರೀತಿಯಲ್ಲಿ ಕಥೆ ಹೆಣೆದು ಜನತೆಯಲ್ಲಿ ಭೀತಿ ಸೃಷ್ಠಿಸಿದ ಘಟನೆ ಕೆಯ್ಯೂರಿನಲ್ಲಿ ಬುಧವಾರ ನಡೆದಿದೆ.

ಕೆಯ್ಯೂರು ಗ್ರಾಮದ ಸಣಂಗಳ ಎಂಬಲ್ಲಿ ಭಾತಿಷಾ ಎಂಬವರಿಗೆ ಸೇರಿರುವ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿರುವ ಕೇರಳ ಮೂಲದ ಮಾರ್ಗರೇಟ್ ಎಂಬಾಕೆಯೇ ನಕಲಿ ಸುದ್ದಿಯ ಸೂತ್ರಧಾರಿಣಿ. ರಾತ್ರಿ ಸುಮಾರು 8.30ರ ವೇಳೆಗೆ ನನ್ನ ಮನೆಗೆ ನಾಲ್ಕು ಮಂದಿ ಇದ್ದ ‘ಚಡ್ಡಿ ಗ್ಯಾಂಗ್’ ದರೋಡೆಕೋರರು ಬಂದಿದ್ದಾರೆ. ತಲವಾರು ತೋರಿಸಿ ಬೆದರಿಸಿ, ಹಣ, ಒಡವೆ ಕೇಳಿದ್ದಾರೆ. ನಾನು ಕಿಟಕಿಯ ಮೂಲಕ ಅವರ ಫೋಟೋ ತೆಗೆದಿದ್ದೇನೆ ಎಂದು ಮಾರ್ಗರೇಟ್ ಬಾಡಿಗೆ ಮನೆಯ ಮಾಲಕನಿಗೆ ಬಡ್ಡಿ ಗ್ಯಾಂಗ್ ಹೋಲುವ ರೀತಿಯ ಪೊಟೋದೊಂದಿಗೆ ವಾಟ್ಸ್‌ಫ್‌ನಲ್ಲಿ ಮಾಹಿತಿ ರವಾನಿಸಿ, ಜನತೆಯಲ್ಲಿ ಭೀತಿ ಮೂಡುವ ಅವಾಂತರ ಸೃಷ್ಠಿಸಿದ್ದಾರೆ.

ಕೆಯ್ಯೂರಿಗೆ ಚಡ್ಡಿ ಗ್ಯಾಂಗ್ ಬಂದಿದ್ದಾರೆ ಎನ್ನುವ ಸುದ್ದಿ ಬುಧವಾರ ಬೆಳಿಗ್ಗೆ ಹರಡಲಾರಂಭಿಸಿತ್ತು. ಈ ಕುರಿತು ಅಲ್ಲಿನ ಸ್ಥಳೀಯರು ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ಸರ್ಕಲ್ ಇನ್ಸ್‌ಪೆಕ್ಟರ್ ರವಿ.ಬಿ.ಎಸ್ ಅವರು ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದರು. ಈ ವೇಳೆ ಮಹಿಳೆ ಶೇರ್ ಮಾಡಿಕೊಂಡ ಫೋಟೋಗಳು ಅಸಲಿ ಅಲ್ಲ ಎಂಬ ವಿಚಾರ ತಿಳಿದು ಬಂತು. ಮಹಿಳೆ ಕಳಿಸಿದ ಫೋಟೋಗಳು 2 ವರ್ಷಗಳ ಹಿಂದೆ ಮಲಯಾಳಂ ಮನೋರಮಾ ಪತ್ರಿಕೆಯಲ್ಲಿ ಕೊಟ್ಟಾಯಂನಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿ ಪ್ರಕಟಗೊಂಡಿದ್ದ ಪೊಟೋಗಳಾಗಿವೆ ಎಂಬುವುದನ್ನು ಅವರು ಪತ್ತೆ ಮಾಡಿ, ಆತಂಕದ ವಾತಾವರಣಕ್ಕೆ ತೆರೆ ಎಳೆದರು. ಡಿವೈಎಸ್‌ಪಿ ಅರುಣ್ ನಾಗೇಗೌಡ, ಸಂಪ್ಯ ಠಾಣಾ ತನಿಖಾ ವಿಭಾಗದ ಎಸ್‌ಐ ಸುಷ್ಮಾ ಭಂಡಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯೂಟ್ಯೂಟ್ ವೀಡಿಯೋದ ಸ್ಕ್ರೀನ್ ಶಾಟ್ ಪೊಟೋ...!

ಮಾರ್ಗರೇಟ್ ಅವರ ಮೊಬೈಲ್ ಪೋನ್ ಪರಿಶೀಲನೆ ಮಾಡಿದ ವೇಳೆ ಅವರು ಯೂಟ್ಯೂಬ್ ಹೆಚ್ಚಾಗಿ ನೋಡುತ್ತಿರುವುದು ಅದರಲ್ಲೂ ಕ್ರೈಂಗೆ ಸಂಬಂಧಿಸಿದ ವೀಡಿಯೋಗಳನ್ನೇ ಹೆಚ್ಚಾಗಿ ನೋಡುತ್ತಿರುವುದು ತಿಳಿದು ಬಂದಿದೆ. ಮಲಯಾಳಂ ಮನೋರಮಾ ಪತ್ರಿಕೆಯಲ್ಲಿ 2 ವರ್ಷಗಳ ಹಿಂದೆ ಪ್ರಸಾರಗೊಂಡ ವೀಡಿಯೋ ಸ್ಟೋರಿಯೊಂದರ ವಿಡಿಯೋ ದೃಶ್ಯಗಳಿಂದ ಈ ಫೋಟೋಗಳನ್ನು ಸ್ಟ್ರೀನ್‌ಶಾಟ್ ಮೂಲಕ ತೆಗೆದಿರುವ ಮಾರ್ಗರೇಟ್ ಆ ಫೋಟೋವನ್ನು ಮೊದಲಿಗೆ ಮನೆಯ ಮಾಲಿಕನಿಗೆ ಕಳುಹಿಸಿ ಮನೆಗೆ ದರೋಡೆಕೋರರು ಬಂದಿದ್ದಾರೆ ಎಂದು ತಿಳಿಸಿದ್ದಾರೆ. ತಕ್ಷಣವೇ ಮನೆಯ ಮಾಲಿಕ ಬಾತೀಷ ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೂ ಮಾರ್ಗರೇಟ್ ತೋರಿಸಿದ ಫೋಟೋದ ಮೇಲೆ ಬಾತೀಷ ಅವರಿಗೂ ಸಂಶಯ ಮೂಡಿತ್ತು. ಹಾಗಾಗಿ ಅವರು ಪೊಲೀಸರಿಗೆ ವಿಷಯ ತಿಳಿಸಿರಲಿಲ್ಲ.

ಈ ಹಿಂದೆಯೊಮ್ಮೆ ಮಾರ್ಗರೇಟ್ ಅವರು ನನಗೆ ಹಾವು ಕಚ್ಚಿದೆ ಎಂದು ಮನೆಯ ಮಾಲಿಕ ಬಾತಿಷಾ ಅವರಿಗೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಬಾತಿಷಾ ಅವರ ಮನೆಯವರು ಹೋಗಿ ನೋಡಿದಾಗ ಹಾವು ಕಚ್ಚಿದ ಯಾವುದೇ ಗಾಯದ ಗುರುತುಗಳು ಕಂಡು ಬಂದಿರಲಿಲ್ಲ. ಈ ಹಿನ್ನಲೆಯಲ್ಲಿ ಬಾತಿಷಾ ಅವರು ಮಾರ್ಗರೇಟ್ ತಿಳಿಸಿದ ಚಡ್ಡಿ ಗ್ಯಾಂಗ್ ವಿಚಾರದ ಕುರಿತು ಹೆಚ್ಚು ತಲೆಗೆಡಿಸಿಕೊಂಡಿರಲಿಲ್ಲ.

ನಿಗೂಢತೆ ಹುಟ್ಟು ಹಾಕಿದ ಕಟ್ಟು ಕಥೆ...!

ಚಡ್ಡಿ ಗ್ಯಾಂಗ್‌ನ ಕಥೆ ಹೆಣೆದ ಮಾರ್ಗರೇಟ್ ಮೂಲತಃ ಕೇರಳ ಮೂಲದವರಾಗಿದ್ದು, ಈಕೆ ತನ್ನ ಪತಿ ಸೈಂಟ್ ಜಾರ್ಜ್ ಹಾಗೂ ಮಗುವಿನೊಂದಿಗೆ ಕೆಯ್ಯೂರು ಗ್ರಾಮದ ಸಣಂಗಳಕ್ಕೆ ಕಳೆದ 40 ದಿನಗಳ ಹಿಂದೆಯಷ್ಟೇ ಬಂದು ಬಾತಿಷಾ ಎಂಬವರಿಗೆ ಸೇರಿದ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ವಾಸ್ತವ್ಯವಿದ್ದರು. ಜಾರ್ಜ್ ಅವರು ರಬ್ಬರ್ ಟ್ಯಾಪಿಂಗ್ ಹಾಗೂ ರಬ್ಬರ್ ಹಾಲು ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲೇ ಇರುತ್ತಿದ್ದ ಮಾರ್ಗರೇಟ್ ಇಂಗ್ಲೀಷ್‌ನಲ್ಲಿ ನಿರರ್ಗಳವಾಗಿ ಮಾತನಾಡ ಬಲ್ಲ ವಿದ್ಯಾವಂತೆಯಾಗಿದ್ದು, ಯಾಕೆ ಹೀಗೆ ಮಾಡಿದಳೆಂಬುವುದು ನಿಗೂಢತೆಯನ್ನು ಹುಟ್ಟು ಹಾಕಿದೆ.

ಮಾರ್ಗರೇಟ್ ಹೀಗ್ಯಾಕೆ ಮಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ ವೇಳೆಯೂ ಮಾರ್ಗರೇಟ್ ಇದೊಂದು ಕಟ್ಟು ಕಥೆ ಎಂಬುದನ್ನು ಹೇಳಲು ಹಿಂದೇಟು ಹಾಕಿದ್ದರು. ನನ್ನ ಮನೆಗೆ ದರೋಡೆಕೋರರು ಬಂದಿದ್ದಾರೆ ಎಂದೇ ವಾದಕ್ಕಿಳಿದು ರಾದ್ಧಾಂತ ಎಬ್ಬಿಸಿದ್ದರು. ಸುದ್ದಿ ಪ್ರಸಾರ ಮಾಡಲು ಸ್ಥಳಕ್ಕೆ ತೆರಳಿದ ಮಾಧ್ಯಮದವರ ಮೇಲೂ ರೇಗಾಡಿದ್ದರು. ನನ್ನ ಅನುಮತಿ ಇಲ್ಲದೆ ವೀಡಿಯೋ ಮಾಡಬಾರದು ಎಂದು ಕ್ಯಾಮರಾ ಎಳೆಯಲು ಮುಂದಾದ ಘಟನೆಯೂ ನಡೆದಿದೆ. ಮೊಬೈಲ್ ವಶಕ್ಕೆ ಪಡೆದುಕೊಂಡ ಪೊಲೀಸರ ಮೇಲೂ ರೇಗಾಡಿದ ಮಹಿಳೆ ನೀವ್ಯಾರು, ನಿಮ್ಮನ್ಯಾರು ಇಲ್ಲಿಗೆ ಬರಲು ಹೇಳಿದ್ದು, ನನ್ನ ಮೊಬೈಲ್ ಕೊಡಿ, ಇಲ್ಲವಾದರೆ ನಾನು ಕೇರಳ ಪೊಲೀಸರನ್ನು ಇಲ್ಲಿಗೆ ಕರೆಸುತ್ತೇನೆ ಎಂದು ಇಂಗ್ಲೀಷ್ ಮತ್ತು ಮಲಯಾಳಂ ಭಾಷೆಯಲ್ಲಿ ಗದರಿಸಿದ ಘಟನೆಯೂ ನಡೆಯಿತು.

ಮಾರ್ಗರೇಟ್ ಮನೆಯಲ್ಲಿ ಆಕೆಯನ್ನು ಬಿಟ್ಟರೆ ಪತಿ ಹಾಗೂ ಮಗು ಮಾತ್ರ ಇರುವುದೆಂದು ಹೇಳುತ್ತಿದ್ದಾರೆ. ಆದರೆ ರಾತ್ರಿ ವೇಳೆ ಆ ಮನೆಯಲ್ಲಿ ಹಲವು ಮಂದಿ ಇರುವುದು ಕಂಡು ಬರುತ್ತಿದೆ. ಮನೆಯಲ್ಲಿ ಯಾವುದೋ ರಹಸ್ಯ ಚಟುಚಟಿಕೆ ನಡೆಯುತ್ತಿದೆ ಎಂಬುವುದಕ್ಕೆ ಚಡ್ಡಿ ಗ್ಯಾಂಗ್ ರದ್ಧಾಂತ ಸೃಷ್ಟಿಯೇ ಒಂದು ಸಾಕ್ಷಿಯಾಗಿದ್ದು,ಈ ಕುಟುಂಬದ ಮೇಲೆ ಪೊಲೀಸರು ಕಣ್ಣಿಡಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

ಸಂಪೂರ್ಣ ಕಟ್ಟು ಕಥೆ

ಕೆಯ್ಯೂರಿನಲ್ಲಿ ಚಡ್ಡಿ ಗ್ಯಾಂಗಿನಿಂದ ತಲುವಾರು ತೋರಿಸಿ ಬೆದರಿಕೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸುದ್ದಿಯು ಸಂಪೂರ್ಣ ಕಟ್ಟು ಕಥೆಯಾಗಿದೆ. ದ.ಕ.ಜಿಲ್ಲಾ ವ್ಯಾಪ್ತಿಗೆ ಚಡ್ಡಿ ಗ್ಯಾಂಗ್ ದರೋಡೆಕೋರರು ಬಂದಿಲ್ಲ ಎಂದು ಸ್ಪಷ್ಟಪಡಿಸಿರುವ ಪೊಲೀಸರು ಈ ಬಗ್ಗೆ ಯಾರೂ ಭಯ ಪಡುವ ಅಗತ್ಯವಿಲ್ಲ. ಈ ರೀತಿ ಹಳೆಯ ವಿಡಿಯೋಗಳನ್ನು ಅಥವಾ ಪೊಟೋಗಳನ್ನು ಅದರ ಪೂರ್ವಾಪರ ತಿಳಿಯದೆ ಸಾಮಾಜಿಕ ಜಾಲತಾಣಗಳಲ್ಲಿ ಹಚ್ಚಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net