

ಬನ್ನಿಕುಪ್ಪೆ: ಹುಣಸೂರು ತಾಲೂಕು ಬಲ್ಲೆನಳ್ಳಿ ಗ್ರಾಮದ ಶಾಲಾ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಸಿರಿಧಾನ್ಯ ಹಾಗೂ ಬೆಳೆಯ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದಲ್ಲಿ ಮಾತನಾಡಿದ ಪ್ರಗತಿಪರ ಕೃಷಿಕ ಚಲುವರಾಜು, ಸಿರಿಧಾನ್ಯವು ಇಂದು ಶ್ರೀಮಂತ ಹಾಗೂ ಆರೋಗ್ಯವಂತರ ಅಹಾರವಾಗಿದೆ. ಇಂದು ಮಾನವ ಕೋಟಿ-ಕೋಟಿ ಸಂಪಾದಿಸಿದರೂ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ವಿಫಲನಾಗಿದ್ದಾನೆ. ಇದಕ್ಕೆಲ್ಲ ಮಾನವನ ಆಧುನಿಕ ಜೀವನಶೈಲಿಯೇ ಮುಖ್ಯ ಕಾರಣವಾಗಿದೆ. ಇದನ್ನು ಹೋಗಲಾಡಿಸಲು ನಾವುಗಳು ನಮ್ಮ ಆರೋಗ್ಯಕ್ಕಾಗಿ ನಮ್ಮ ಪೂರ್ವಿಕರು ಬಳಸಿದಂತಹ ಶುದ್ಧ ಆಹಾರ ಪದ್ಧತಿಯನ್ನು ಅನುಸರಿಸಬೇಕು ಎಂದರು.
ಸಿರಿಧಾನ್ಯದ ಬೆಳೆಗಳನ್ನು ಎಲ್ಲ ಕಾಲದಲ್ಲೂ ಬೆಳೆಯಬಹುದು. ಇದಕ್ಕೆ ಯಾವ ರೋಗಬಾಧೆಗಳು ಕ್ರಿಮಿಕೀಟಗಳು ಹಾಗೂ ಔಷಧಿ ರಾಸಾಯನಿಕ ಗೊಬ್ಬರದ ಅವಶ್ಯಕತೆ ಇರುವುದಿಲ್ಲ ರೈತರು ತುಂಡು ಭೂಮಿಯಲ್ಲಿ ಈ ಸಿರಿಧಾನ್ಯಗಳನ್ನು ಬೆಳೆದು ಮನೆಗೆ ಉಪಯೋಗಿಸಿ ಮಿಕ್ಕ ಧಾನ್ಯವನ್ನು ಮಾರುಕಟ್ಟೆಯಲ್ಲಿ ಮಾರಬಹುದು. ತಮ್ಮ ಮಕ್ಕಳಿಗೆ ಜಂಕ್ಫುಡ್ಗಳನ್ನು ತಿನ್ನಿಸುವ ಬದಲು ಸಿರಿಧಾನ್ಯದ ಆಹಾರವನ್ನು ತಿನಿಸಿದರೆ ಮಕ್ಕಳು ಉತ್ತಮ ಆರೋಗ್ಯ ಹಾಗೂ ಶಕ್ತಿಯುತವಾಗಿ ಬೆಳೆಯುತ್ತವೆ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನೆ ಅಧಿಕಾರಿ ಧನಂಜಯ ಮಾತನಾಡಿ, ನಮ್ಮ ಸಂಸ್ಥೆಯು ರೈತರಿಗಾಗಿ ಅನೇಕ ರೀತಿಯ ಕೃಷಿ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಹೈನುಗಾರಿಕೆ, ತಂತ್ರಜ್ಞಾನ, ತೋಟಗಾರಿಕೆ, ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ಭದ್ರತೆ, ಕೌಶಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಘದ ಸದಸ್ಯರು ಇಂತಹ ಕಾರ್ಯಕ್ರಮಗಳನ್ನು ಸದಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಕಿವಮಾತು ಹೇಳಿದರು.
ಗ್ರಾಪಂ ಸದಸ್ಯೆ ನಿಂಗಮ್ಮ, ಸೇವಾ ಪ್ರತಿನಿಧಿ ಛಾಯಾ ಕುಮಾರಿ, ಶಿವಶಂಕರ, ಸಂತೋಷ, ತಮ್ಮಣ್ಣ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.