ಅಂಗನವಾಡಿ ಕೇಂದ್ರಗಳಿಗೆ ಸೌಲಭ್ಯ ಕಲ್ಪಿಸಿ; ಸಿಇಒ ರಾಹುಲ ಶಿಂಧೆ ಸೂಚನೆ

IMG-20250812-WA0037.jpg
Published on

-ಕರೀಕಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿಗಳ ಪರಿಶೀಲನೆ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಕಲಿಕಾ ವಾತಾವರಣ ನಿರ್ಮಿಸುವುದರ ಜತೆಗೆ ಕುಡಿಯುವ ನೀರು, ಶೌಚಗೃಹ ಸೇರಿ ಮೂಲಭೂತ ಸೌಕರ್ಯಗಳನ್ನು ಒಗಿಸಬೇಕು ಎಂದು ಪಿಡಿಒಗಳಿಗೆ ಜಿಪಂ ಸಿಇಒ ರಾಹುಲ ಶಿಂಧೆ ಸೂಚಿಸಿದರು.

ಸವದತ್ತಿ ತಾಲೂಕಿನ ಕರೀಕಟ್ಟಿ ಗ್ರಾಪಂ ವ್ಯಾಪ್ತಿಯ ಅಂಗನವಾಡಿ ಕೇಂದ್ರ, ಸರ್ಕಾರಿ ಪ್ರೌಢ ಶಾಲೆ, ಕೂಸಿನ ಮನೆಗೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯ, ಗುಣಮಟ್ಟದ ಆಹಾರ, ಕಲಿಕೆ ಹೆಚ್ಚಿಸಿದರೆ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಿಸಲು ಸಾಧ್ಯವಾಗುತ್ತಿದೆ. ಈ ವಿಷಯದಲ್ಲಿ ಗ್ರಾಪಂಗಳ ಪಾತ್ರ ದೊಡ್ಡದಿದೆ ಎಂದು ಹೇಳಿದರು.

ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಮನರೇಗಾ ಯೋಜನೆಯಡಿ ಕೈಗೊಂಡಿರುವ ಶಾಲಾಭಿವೃದ್ಧಿ ಕಾಮಗಾರಿಗಳಾದ ಹೈ-ಟೆಕ್ ಶೌಚಾಲಯ ಹಾಗೂ ಆಟದ ಮೈದಾನ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿಯೇ ಪೂರ್ಣಗೊಳಿಸಬೇಕು. ಕಾಮಗಾರಿಗಳ ಗುಣಮಟ್ಟವನ್ನು ತಾಲೂಕು, ಗ್ರಾಪಂ ಅಧಿಕಾರಿಗಳು ಖುದ್ದಾಗಿ ಪರಿಶೀಲನೆ ನಡೆಸಬೇಕು. ಕಳಪೆ ಮಟ್ಟದ ಕಾಮಗಾರಿ ಕಂಡು ಬಂದರೆ ತಕ್ಷಣವೇ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಸರ್ಕಾರಗಳು ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಮಕ್ಕಳ ಹಾಜರಾತಿ, ಕಲಿಕಾ ಗುಣಮಟ್ಟ ಹೆಚ್ಚಿಸಲು ಸಾಕಷ್ಟು ಅನುದಾನ ಖರ್ಚು ಮಾಡುತ್ತಿವೆ. ಸ್ಥಳೀಯ ಸಂಸ್ಥೆಗಳು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿವೆ. ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧವಾದ ಕುಡಿಯುವ ನೀರು ಸೌಲಭ್ಯ ಕಲ್ಪಿಸಬೇಕು. ಪ್ರತಿ ದಿನ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಶಾಲೆಯ ಒಳ ಮತ್ತು ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳ ಸಂರಕ್ಷಣೆಗೆ ಎಸ್‌ಡಿಎಂಸಿಗಳು, ಶಿಕ್ಷಕರು ಜಾಗೃತ ವಹಿಸಬೇಕು ಎಂದು ಸೂಚಿಸಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಬಡಕುಂದ್ರಿ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಬಿ. ವಿ ಐನಗೌಡರ, ತಾಪಂ ಸಹಾಯಕ ನಿರ್ದೇಶಕರು (ಗ್ರಾ.ಉ) ಆರ್. ಬಿ ರಕ್ಕಸಗಿ, ತಾಪಂ ಸಹಾಯಕ ನಿರ್ದೇಶಕರು (ಪಂ.ರಾ) ಆರ್.ಎ ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮೃತ ಸಾಣಿಕೊಪ್ಪ, ಪಿಡಿಒ ಅಧಿಕಾರಿ ಮಹಾದೇವ ಗಡೇಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net