

ಅಹಮದಾಬಾದ್: ಅಖಂಡ ಭಾರತದ ಆರು ನದಿಗಳ ಪೈಕಿ ಮೂರು ನದಿಗಳು ಪಾಕಿಸ್ತಾನದ ಮೂಲಕ ಹರಿಯುತ್ತಿವೆ. ಈ ನದಿಗಳ ನೀರಿನಲ್ಲಿ ಭಾರತದ ಪಾಲನ್ನು ಪಾಕ್ಗೆ ಹರಿಯದಂತೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಅವರು ಮಹಾರಾಷ್ಟ್ರದ ನಾಗಪುರದಿಂದ ಗುಜರಾತ್ನಲ್ಲಿ ನಡೆದ ಜನಸಂವಾದ್ ವರ್ಚುವಲ್ ರಾಲಿ ಉದ್ದೇಶಿಸಿ ಮಾತನಾಡಿದರು. ಶಾಂತಿ, ಅಹಿಂಸೆಯಲ್ಲಿ ಭಾರತ ನಂಬಿಕೆ ಇರಿಸಿಕೊಂಡಿದೆ. ಭೌಗೋಳಿಕವಾದ ವಿಸ್ತರಣಾ ಕ್ರಿಯೆ ಹೊಂದಿ ಬಲಿಷ್ಠವಾಗುವ ಬಗ್ಗೆ ಚಿಂತನೆ ನಡೆಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅಖಂಡ ಭಾರತದಲ್ಲಿ ಆರು ನದಿಗಳಿದ್ದವು. ಇವು ಭಾರತ ಮತ್ತು ಪಾಕಿಸ್ಥಾನವನ್ನು ಹಾದು ಹೋಗುತ್ತಿದ್ದವು. ಇದರಲ್ಲಿ ಪಾಕಿಸ್ತಾನಕ್ಕೆ ಮೂರು ಭಾರತಕ್ಕೆ ಮೂರು ಎಂದು ವಿಂಗಡಿಸಿ ನೀರಿನ ಬಳಕೆಯ ದೃಷ್ಟಿಯಿಂದ ಪಾಲು ಮಾಡಲಾಗಿತ್ತು. ಪಾಕಿಸ್ತಾನದ ಮೂರು ನದಿಗಳ ನೀರಿನ ಜತೆಗೆ ಭಾರತದ ಮೂರು ನದಿಗಳ ನೀರು ಕೂಡ ಪಾಕಿಸ್ಥಾನಕ್ಕೇ ಬಳಕೆಗೆ ಸಿಗುತ್ತಿದೆ. ಭಾರತದ ತನ್ನ ಪಾಲಿನ ನದಿಗಳ ನೀರನ್ನು ಇದುವರೆಗೂ ತಡೆದಿರಲಿಲ್ಲ.
ಈ ನದಿಗಳ ನೀರಿನ ಬಳಕೆಯ ವಿಚಾರವಾಗಿ ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶಗಳ ನಡುವೆ ಭಿನ್ನಮತವಿದೆ. ಇದು ಸರಿ ಹೋಗಬೇಕಾಗಿದೆ. ಈ ವಿಚಾರವಾಗಿ ಜಮ್ಮು-ಕಾಶ್ಮೀರದ ಗವರ್ನರ್ ಸತ್ಯಪಾಲ್ ಸಿಂಗ್ ಮತ್ತು ಪಂಜಾಬಿನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ನಡುವೆ ಒಪ್ಪಂದ ಮಾಡಿಕೊಳ್ಳುವಂತೆ ಹೇಳಿದ್ದೇನೆ. ಇದಾದರೆ, ಕಾಶ್ಮೀರ, ಪಂಜಾಬ್, ರಾಜಸ್ಥಾನ, ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶಗಳು ಈ ನೀರನ್ನು ಪಡೆದುಕೊಳ್ಳಲಿವೆ. ನಾವು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈ ರಾಜ್ಯಗಳ ಮುಖ್ಯಮಂತ್ರಿಗಳು ಒಮ್ಮತಕ್ಕೆ ಬಂದರೆ ಒಂಭತ್ತು ಪ್ರಾಜೆಕ್ಟ್ಗಳ ಪೈಕಿ ಏಳು ಪೂರ್ಣಗೊಂಡಂತಾಗುತ್ತದೆ ಎಂದರು.