ಕೇಂದ್ರದ ವಿರುದ್ಧ ಅಪಪ್ರಚಾರ

2AAAAA
Published on

ಸಂಸತ್ತಿನಲ್ಲಿ ಅಂಕಿ-ಅಂಶ ಸಮೇತ ವಿವರಿಸಿದ ಸಂಸದ ಡಾ. ಸುಧಾಕರ್

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಅನುದಾನದ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ ಎಂದು ಸಂಸತ್ತಿನ ಅಧಿವೇಶನದಲ್ಲಿ ಸಂಸದ ಡಾ ಕೆ.ಸುಧಾಕರ್ ಬೇಸರಿಸಿದ್ದಾರೆ.

ಅನುದಾನದ ಅಂಕಿ ಅಂಶಗಳ ಅವಲೋಕನದಿಂದ ಎನ್‌ಡಿಎ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ಅತಿ ಹೆಚ್ಚು ಅನುದಾನವನ್ನು ಈ ರಾಜ್ಯಗಳಿಗೆ ನೀಡಿದೆ ಎನ್ನುವುದು ಗೊತ್ತಾಗುತ್ತದೆ ಎಂದೂ ಪ್ರತಿಪಾದಿಸಿದ್ದಾರೆ.

ಲೋಕಸಭೆಯಲ್ಲಿ ಪೂರಕ ಅನುದಾನಗಳ ಬೇಡಿಕೆ ವಿಧೇಯಕದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ವಾತನಾಡಿದ ಅವರು, ಹಿಂದಿನ ಯಪಿಎ ಸರ್ಕಾರದಲ್ಲಿ ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ಪಾಲು ಶೇ.30.5 ನಿಂದ ಶೇ.32 ಕ್ಕೆ ಏರಿಕೆಯಾಗಿದ್ದು ಮೋದಿ ಆಡಳಿತದಲ್ಲಿ ಶೇ.40 ಕ್ಕೆ ಏರಿಕೆಯಾಗಿದೆ. 2004 ರಿಂದ 2014 ರ ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ 81,795 ಕೋಟಿ ರೂ ತೆರಿಗೆ ಹಂಚಿಕೆಯಾಗಿದ್ದರೆ, 2014-2024 ರ ಎನ್‌ಡಿಎ ಸರ್ಕಾರದ ಅವಧಿಯಲ್ಲಿ 2.77 ಲಕ್ಷ ಕೋಟಿ ರೂ ತೆರಿಗೆ ಹಂಚಿಕೆಯೊಂದಿಗೆ ಶೇ.239 ಏರಿಕೆಯಾಗಿದೆ. ಹಾಗೆಯೇ ಯುಪಿಎ ಕರ್ನಾಟಕಕ್ಕೆ 60,779 ಕೋಟಿ ರೂ. ಅನುದಾನ ನೀಡಿದರೆ, ಎನ್‌ಡಿಎ ಸರ್ಕಾರದಿಂದ 2.08 ಲಕ್ಷ ಕೋಟಿ ರೂ. ಅನುದಾನ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ರೈತರಿಗೆ ನೆರವು

2013-2014ರ ಯುಪಿಎ ಅವಧಿಯಲ್ಲಿ ರೈತರಿಗೆ 7 ಲಕ್ಷ ಕೋಟಿ ರೂ.ವರೆಗೆ ಸಾಲ ಮತ್ತು 2023-24 ರ ಎನ್‌ಡಿಎ ಅವಧಿಯಲ್ಲಿ 19 ಲಕ್ಷ ಕೋಟಿ ರೂ ಸಾಲ ಸಿಕ್ಕಿದೆ. ಕರೊನಾ ಸಂಕಷ್ಟದ ವೇಳೆ ರಸಗೊಬ್ಬರ ದರ ದಿಢೀರನೆ ಏರಿಕೆಯಾದರೂ ಪ್ರಧಾನಿ ನರೇಂದ್ರ ಮೋದಿ ಆ ಹೊರೆಯನ್ನು ರೈತರ ಮೇಲೆ ಹಾಕಲಿಲ್ಲ. ಇಂದಿಗೂ ರಸಗೊಬ್ಬರ ದರ ಏರಿಕೆ ಕಂಡಿಲ್ಲ. ಯುಪಿಎ ಅವಧಿಯಲ್ಲಿ ರೈತರಿಗೆ ಬಜೆಟ್‌ನಲ್ಲಿ 22,000 ಕೋಟಿ ರೂ ಸಿಕ್ಕರೆ, ಮೋದಿ ಸರ್ಕಾರದಲ್ಲಿ (2023-24 ರಲ್ಲಿ) 1,22,000 ಕೋಟಿ ರೂ.ಗೆ ಹೆಚ್ಚಳವಾಗಿದೆ. ಇನ್ನು ಕಷಿ ಬೆಳವಣಿಗೆ ದರ ಶೇ.3.4% ಕ್ಕೆ ಏರಿದ್ದು 9 ಸಾವಿರ ಕಷಿ ಸಂಗಳನ್ನು ಆರಂಭಿಸಲಾಗಿದೆ. ಇದು ರೈತ ಸಮುದಾಯಕ್ಕೆ ಸಹಕಾರಿಯಾಗಿದೆ ಎಂದು ಸಂಸದರು ತಿಳಿಸಿದ್ದಾರೆ.

ವಿಕಸಿತ ಭಾರತದ ಬದ್ಧತೆ

ಪ್ರಧಾನಿ ನರೇಂದ್ರ ಮೋದಿ ವಿಕಸಿತ ಭಾರತ ಕುರಿತು ಬದ್ಧತೆ ಹೊಂದಿದ್ದು ಬಜೆಟ್ ಅವಧಿಯನ್ನು 2017-18 ರಿಂದ ಫೆಬ್ರವರಿ ಮೊದಲ ದಿನಕ್ಕೆ ಬದಲಾಯಿಸಿರು ವುದರಿಂದ ರಾಜ್ಯಗಳು, ಪೂರಕವಾಗಿ ಬಜೆಟ್ ರೂಪಿಸಲು ಸಹಕಾರಿಯಾಗಿದೆ ಎಂದು ಸುಧಾಕರ್ ತಿಳಿಸಿದ್ದಾರೆ. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಕೆಲವರು ಟೀಕಿಸುತ್ತಾರೆ. ಜಾಗತಿಕ ಸವಾಲುಗಳ ನಡುವೆ ಸಮರ್ಥತೆಯನ್ನು ಅವರು ತೋರಿದ್ದಾರೆ. ಉತ್ತಮ ಆರ್ಥಿಕ ಸಚಿವರಾಗಲು ಹದಯ ಮತ್ತು ಬುದ್ಧಿ ಬೇಕು ಎಂಬುದನ್ನು ನಿರೂಪಿಸಿದ್ದಾರೆ ಎಂತಲೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ನೀತಿ ರದ್ದು

ರಾಜ್ಯ ಬಿಜೆಪಿ ಸರ್ಕಾರವು ಕರ್ನಾಟಕದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಳಿಸಿತ್ತು. ಇದನ್ನು ಅಧಿಕಾರಕ್ಕೆ ಬಂದ ಕೂಡಲೇ ಕಾಂಗ್ರೆಸ್ ರದ್ದುಪಡಿಸಿದೆ. ಹೊಸ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿಲ್ಲ. ಇದು ಯುವಜನರಿಗೆ ಕಾಂಗ್ರೆಸ್ ನೀಡುವ ನ್ಯಾಯವೇ? ಎಂದು ಸಂಸದ ಸುಧಾಕರ್ ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net