

ನವದೆಹಲಿ : ಕರೊನಾ ಸಾಂಕ್ರಾಮಿಕದ ನಡುವೆ ದೆಹಲಿಯ ಸೆಂಟ್ರಲ್ ವಿಸ್ತಾ ಯೋಜನೆಗಾಗಿ 20 ಸಾವಿರ ಕೋಟಿ ರೂಪಾಯಿ ವ್ಯಯ ಮಾಡುವುದು ಎಷ್ಟು ಸಮಂಜಸ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ. ಅದೇ ಹಣದಲ್ಲಿ 62 ಕೋಟಿ ಕರೊನಾ ಲಸಿಕೆಯ ಡೋಸ್ಗಳನ್ನು ಸರ್ಕಾರ ಖರೀದಿಸಬಹುದು ಅಥವಾ ವೈದ್ಯಕೀಯ ಮೂಲಸೌಕರ್ಯಗಳನ್ನು ಉತ್ತಮಗೊಳಿಸಬಹುದು ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆದ ಅವರು, ಈ ಬಗ್ಗೆ ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಕರೊನಾ ಸಾಂಕ್ರಾಮಿಕವನ್ನು ಕೇಂದ್ರ ಸರ್ಕಾರ ನಿಭಾಯಿಸುತ್ತಿರುವ ರೀತಿಯ ಬಗ್ಗೆ ಕೂಡ ಟೀಕೆ ಮಾಡಿದ ಪ್ರಿಯಾಂಕಾ ಗಾಂಧಿ, ಅಷ್ಟೊಂದು ಹಣವನ್ನು ಆಸ್ಪತ್ರೆಯ ಬೆಡ್ಗಳು ಮತ್ತು ವೈದ್ಯಕೀಯ ಉಪಕರಣಗಳಿಗಾಗಿ ಬಳಸಬಹುದಾಗಿರುವಾಗ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಕೇಂದ್ರ ಸರ್ಕಾರ ಮುಂದುವರಿಸುತ್ತಿರುವುದು ಖಂಡನೀಯ ಎಂದರು.
ಸಭೆಯ ನಂತರದಲ್ಲಿ ಗಾಂಧಿ ಅವರು, "ಪ್ರಧಾನಿಯ ಹೊಸ ನಿವಾಸ ಮತ್ತು ಸೆಂಟ್ರಲ್ ವಿಸ್ತಾ ವೆಚ್ಚ = 20,000 ಕೋಟಿ ರೂ. = 62 ಕೋಟಿ ಲಸಿಕೆ ಡೋಸ್ಗಳು = 22 ಕೋಟಿ ರೆಮ್ಡೆಸಿವಿರ್ ವಯಲ್ಗಳು = 3 ಕೋಟಿ 10 ಲೀಟರ್ ಆಕ್ಸಿಜನ್ ಸಿಲಿಂಡರ್ಗಳು = 12,000 ಬೆಡ್ಗಳುಳ್ಳ 13 ಏಮ್ಸ್ ಆಸ್ಪತ್ರೆಗಳು. ಯಾಕೆ ?" ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)