ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಜತೆ ಆಟೋ ಚಾಲಕರ ತಳ್ಳಾಟ

mng--crime
Published on

ಮಂಗಳೂರು: ಹಂಪನಕಟ್ಟೆ ಬಳಿಯ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಆಟೋ ಚಾಲಕರು ಮತ್ತು ರೈಲು ಪ್ರಯಾಣಿಕರ ಮಧ್ಯೆ ಹೊಯ್ ಕೈ ನಡೆದಿದ್ದು ಪರಸ್ಪರ ತಳ್ಳಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಮಹಿಳೆಯರು ಎಂಬುದನ್ನೂ ಗಮನಿಸದೆ ಆಟೋ ಚಾಲಕರು ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆಕ್ಷೇಪ ಕೇಳಿಬಂದಿದೆ.


ಸೆಂಟ್ರಲ್ ರೈಲ್ವೇ ನಿಲ್ದಾಣದ ಹೊರಗೆ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಂಗಳವಾರ ಬೆಳಗ್ಗೆ ಚೆನ್ನೈನಿಂದ ಬಂದಿದ್ದ ದಂಪತಿಯನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯಲು ಇಬ್ಬರು ಬಂದಿದ್ದರು. ರೈಲ್ವೆ ನಿಲ್ದಾಣದಲ್ಲಿ ನಿಗದಿತ ಸ್ಥಳಗಳಲ್ಲಿ ಮಾತ್ರ ವಾಹನ ಪಾಕಿರ್ಂಗ್ ಮಾಡಬೇಕು. ನಿಲ್ದಾಣದ ಮುಂದಿನ ಮುಖ್ಯ ಗೇಟ್ ಬಳಿ ಪಿಕಪ್ ಮತ್ತು ಡ್ರಾಪ್‌ಗೆ ಮಾತ್ರ ಅನುಮತಿಯಿದ್ದು ಖಾಲಿ ವಾಹನ ತರುವಂತಿಲ್ಲ.


ಇದೇ ವಿಚಾರದಲ್ಲಿ ರೈಲು ಪ್ರಯಾಣಿಕರನ್ನು ಕರೆದೊಯ್ಯಲು ಬಂದಿದ್ದ ಇಬ್ಬರು ಮತ್ತು ಪಾಕಿರ್ಂಗ್ ನೋಡಿಕೊಳ್ಳುವ ಚಂದನ್ ಎಂಬಾತನ ನಡುವೆ ವಾಗ್ವಾದ ನಡೆದಿದೆ. ಪಾಕಿರ್ಂಗ್ ನೋಡಿಕೊಳ್ಳುವ ಚಂದನ್ ಪರ ರಿಕ್ಷಾ ಚಾಲಕರು ವಾದ ಮಾಡಿದರು. ನಂತರ ವಾಗ್ವಾದ ತಾರಕಕ್ಕೇರಿದ್ದು, ಪ್ರಯಾಣಿಕರ ಜತೆಗೆ ಆಟೋ ಚಾಲಕರು ಜಗಳ ಮಾಡಿದ್ದಾರೆ. ಹೊಡೆದಾಟದ ವಿಡಿಯೋ ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿದೆ.


ಆಟೋ ಚಾಲಕರ ಗುರುತು ಪತ್ತೆ ಹಚ್ಚಲಾಗಿದೆ. ಪ್ರಯಾಣಿಕರ ಗುರುತನ್ನು ಪರಿಶೀಲನೆ ಮಾಡಲಾಗುತ್ತಿದೆ. ಈ ವಿಷಯದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net