ಚಾರ್ವಾಕ ಕೃಷಿ ಪತ್ತಿನ ಸಹಕಾರ ಸಂಘ ಮಾದರಿ : ಎಸ್.ಬಿ.ಜಯರಾಮ ರೈ ಪ್ರಶಂಸೆ

New Project (4)
Published on

ವಿಜಯವಾಣಿ ಸುದ್ದಿಜಾಲ ಕಡಬ

ಸಹಕಾರ ಮತ್ತು ಸಂಘಟನೆ ನಾಣ್ಯದ ಎರಡು ಮುಖಗಳು. ಸಹಕಾರ ಸಂಘಗಳ ತತ್ವಗಳನ್ನು ಪಾಲಿಸಿಕೊಂಡು ಬರುತ್ತಿರುವ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಾದರಿ ಸಂಘವಾಗಿ ಗುರುತಿಸಿಕೊಂಡಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ಬಿ.ಜಯರಾಮ ರೈ ಹೇಳಿದರು.

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದ ಸವಿನೆನಪಿಗೆ ಸಂಘದ ಕಾರ್ಯವ್ಯಾಪ್ತಿಯ ರೈತರಿಗೆ ಹಾಗೂ ಸದಸ್ಯರಿಗೆ ಮಂಗಳವಾರ ಕಾಣಿಯೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಲಭಿಸುವ ಸೌಲಭ್ಯಗಳ ಮಾಹಿತಿ ಮತ್ತು ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪುತ್ತೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಎಸ್.ರಘು ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಕಾರ ಇಲಾಖೆಗಳಿಂದ ಸಿಗುವ ಸವಲತ್ತುಗಳ ಮಾಹಿತಿ ನೀಡಿ, ಸಂಘದ ಶತಮಾನೋತ್ಸವದ ನೆನಪಿಗೆ ಹಮ್ಮಿಕೊಂಡಿರುವ ಎಲ್ಲ ಕಾರ್ಯಕ್ರಮಗಳು ಬಹಳ ಪ್ರಯೋಜನಕಾರಿಯಾಗಿದೆ ಎಂದರು.

ಸವಣೂರು ಕಾಣಿಯೂರು ರೈತ ಉತ್ಪಾದಕರ ಕಂಪೆನಿಯ ಅಧ್ಯಕ್ಷ ಗಿರಿಶಂಕರ ಸುಲಾಯ ಮಾತನಾಡಿದರು. ಪುತ್ತೂರು ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಾಕ್ಷರತಾ ಆಪ್ತ ಸಮಾಲೋಚಕಾರದ ಗೀತಾ ವಿಜಯ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಕಡಬ ಕೃಷಿ ಅಧಿಕಾರಿ ಸೀಮಾ ಪಿ.ಎಂ.ಕಿಸಾನ್ ಯೋಜನೆ ಮತ್ತು ಕೃಷಿ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮೇಲ್ವಿಚಾರಕ ವಸಂತ್ ಎಸ್., ಕಾಣಿಯೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ, ಕೊಪ್ಪ ಕೆಳಗಿನಕೇರಿ ಗ್ರಾಮ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಸಂತ ಕುಂಬಾರ, ಕಾಣಿಯೂರು ಗ್ರಾಮ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಸಂತ ಗೌಡ ಕಂಪ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ ಉಪಸ್ಥಿತರಿದ್ದರು.

ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಧನಂಜಯ ಕೇನಾಜೆ ಸನ್ಮಾನಿತರ ಪರಿಚಯ ವಾಚಿಸಿದರು. ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ವಂದಿಸಿದರು. ಶಿವರಾಮ ರೈ ಪಿಜಕ್ಕಳ ನಿರೂಪಿಸಿದರು.

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರು, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷರು ಆಗಿರುವ ಎಸ್.ಬಿ.ಜಯರಾಮ ರೈ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net