

ಯಲಹಂಕ : ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಯಶಸ್ಸಿಗೆ ಕಾರಣೀಭೂತರಾದ ವೀರ ಸೈನಿಕರಿಗೆ ಬೆಂಬಲ ಸೂಚಿಸಿ ಯಲಹಂಕದಲ್ಲಿ ಸೋಮವಾರ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ತಿರಂಗಯಾತ್ರೆ ನಡೆಯಿತು.
ಯಲಹಂಕ ಒಲ್ಡ್ ಟೌನ್ ಅಂಚೆ ಕಚೇರಿಯ ಬಳಿಯಿಂದ 350 ಅಡಿ ಉದ್ದದ ಬೃಹತ್ ತಿರಂಗ ಧ್ವಜದೊಂದಿಗೆ ಪೊಲೀಸ್ ಠಾಣೆ ವೃತ್ತ, ಎನ್‌ಇಎಸ್, ಶೇಷಾದ್ರಿಪುರಂ ಕಾಲೇಜು, ವಿಷ್ಣು ಪಾರ್ಕ್ ಹೋಟೆಲ್, ಚಿಕ್ಕಬೊಮ್ಮಸಂದ್ರ ಕ್ರಾಸ್, ಉಪನಗರ ಬಸ್ ನಿಲ್ದಾಣ ಮಾರ್ಗವಾಗಿ ಹೊಯ್ಸಳ ಕ್ರೀಡಾಂಗಣದವರೆಗೆ ಸಾಗಿತು.
ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ನಿವೃತ್ತ ಸೈನಿಕರು, ವಿದ್ಯಾರ್ಥಿಗಳು, ಯುವಕರು, ವರ್ತಕರು, ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ದೇಶಭಕ್ತ ನಾಗರೀಕರು ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡರು.
ತಿರಂಗಯಾತ್ರೆಯ ಮಾರ್ಗದುದ್ದಕ್ಕೂ ಭಾರತೀಯ ಸೈನಿಕರ ಪರಾಕ್ರಮದ ಪರವಾದ ಘೋಷಣೆಗಳು ಮೊಳಗಿದವು. ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ತಿರಂಗಯಾತ್ರೆ ಉದ್ದೇಶಿಸಿ ಮಾತನಾಡಿದ ಶಾಸಕ ಎಸ್.ಆರ್.ವಿಶ್ವನಾಥ ‘ಪಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರಿಂದ ನಡೆದ ವಿಧ್ವಂಸಕ ಕೃತ್ಯ ಕ್ಷಮೆಗೆ ಅನರ್ಹ ಕೃತ್ಯವಾಗಿದೆ. ಭಾರತೀಯ ನಾಗರೀಕರ ಮೇಲಿನ ಈ ಉಗ್ರರ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು, ‘ಆಪರೇಷನ್ ಸಿಂಧೂರ್’ ಮೂಲಕ ಪಾಕಿಸ್ತಾನದ ಉಗ್ರರ ಅಡಗು ತಾಣಗಳ ಮೇಲೆ ಯಶಸ್ವಿ ದಾಳಿ ನಡೆಸಿ ಧ್ವಂಸ ಮಾಡಿರುವುದು ಹುತಾತ್ಮರಾದ ನಮ್ಮ ನಾಗರೀಕರ ಆತ್ಮಗಳಿಗೆ ಶಾಂತಿ ದೊರಕಿಸಿದೆ. ಭಾರತೀಯ ಸೈನಿಕರ ಸಮಯೋಚಿತವಾದ ದಾಳಿಯನ್ನು ವಿಶ್ವದ ಹಲವು ದೇಶಗಳು ಕೊಂಡಾಂಡಿವೆ, ಆದರೆ ನಮ್ಮ ದೇಶದಲ್ಲೇ ಇರುವ ಕೆಲ ನಿಷ್ಪ್ರಯೋಜಕ ಜನರು ಅಪಸ್ವರದ ಮಾತುಗಳನ್ನಾಡಿ ಅವಮಾನಿಸುತ್ತಿರುವುದು ವಿಷಾದದ ಸಂಗತಿ ಎಂದರು.