

ಉಳ್ಳಾಲ: ಶ್ರಾವಣ ಅಮಾವಾಸ್ಯೆಯ ಪ್ರಯುಕ್ತ ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ಶನಿವಾರ ಸಾವಿರಾರು ಮಂದಿ ಪವಿತ್ರ ತೀರ್ಥ ಸಮುದ್ರ ಸ್ನಾನಗೈದು ಕೃತಾರ್ಥರಾದರು.
ಸೋಮೇಶ್ವರ ಸೋಮನಾಥ ಕ್ಷೇತ್ರದಲ್ಲಿ ಆಚರಿಸಲ್ಪಡುವ ಐದು ವಿಶೇಷ ಪರ್ವಗಳಲ್ಲಿ ಶ್ರಾವಣ ಅಮಾವಾಸ್ಯೆಯ ತೀರ್ಥ ಸ್ನಾನಕ್ಕೆ ಹೆಚ್ಚಿನ ಮಹತ್ವ ಇದೆ. ನರಹರಿ, ಮಲ್ಪೆ ವಡಭಾಂಡೇಶ್ವರ ಸಹಿತ ಇತರ ಭಾಗಗಳಲ್ಲಿ ಆಟಿ ಅಮಾವಾಸ್ಯೆ ಶ್ರೇಷ್ಠವಾದರೆ ಸೋಮೇಶ್ವರದಲ್ಲಿ ಶ್ರಾವಣ ಅಮಾವಾಸ್ಯೆಯ ಸ್ನಾನ ಶ್ರೇಷ್ಠ. ಈ ಹಿನ್ನೆಲೆ ಪ್ರಾತಃಕಾಲ ಮೂರು ಗಂಟೆ ವೇಳೆಗೆ ಭಕ್ತರು ಸೋಮೇಶ್ವರಕ್ಕೆ ಆಗಮಿಸಿ ಕರೆ ಮತ್ತು ಸಮುದ್ರ ಸ್ನಾನ ಮಾಡಿದರು. ಮಳೆ ಇಲ್ಲದ ಕಾರಣ ಕಳೆದ ಬಾರಿಗಿಂತ ಹೆಚ್ಚು ಸಂಖ್ಯೆಯ ಭಕ್ತರಿದ್ದರು. ಸಮುದ್ರ ಸ್ನಾನಕ್ಕಿಳಿಯುವ ಮುನ್ನ ಸಮುದ್ರ ರಾಜನಿಗೆ ಅಡಕೆ, ವೀಳ್ಯದೆಲೆ ಸಮರ್ಪಿಸಿ ತೀರ್ಥ ಸ್ನಾನದ ಬಳಿಕ ಸೋಮನಾಥನಿಗೆ ವಿಶೇಷ ಸೇವೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಲಶ ನೀರು ಹರಿಕೆ ತೀರಿಸಿದರು.
ಈ ದಿನದಂದು ಸೋಮನಾಥನ ಸನ್ನಿಧಿಯಲ್ಲಿರುವ ಕಡಲ ತೀರಕ್ಕೆ ಸಹಸ್ರಾರು ಭಕ್ತರು ಆಗಮಿಸಿ ತೀರ್ಥಸ್ನಾನ ಮಾಡುವುದು ಇಲ್ಲಿನ ವಾಡಿಕೆ. ಕೆಲವರು ಸಮುದ್ರಕ್ಕಿಳಿಯುವ ಮೊದಲು ದೇವಸ್ಥಾನದ ಗದಾತೀರ್ಥ ಕೆರೆಯ ಹಿನ್ನೀರಿನಲ್ಲಿ ಸ್ನಾನ ಮಾಡಿದ ಬಳಿಕ ಸಮುದ್ರದಲ್ಲಿ ಸ್ನಾನ ಮಾಡುತ್ತಾರೆ. ಇದರಿಂದ ಪಾಪ ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ.