ಮೊಹರಂ ಹಬ್ಬದ ಸಂಭ್ರಮ

ಚಿಮ್ಮಡ ಗ್ರಾಮದಲ್ಲಿ ಮೊಹರಂ ನಿಮಿತ್ತ ನಡೆದ ಡೋಲಿ ಮೆರವಣಿಗೆಯಲ್ಲಿ ಪಾಲ್ಗೊಂಡ ಜನಸ್ತೋಮ.
ಚಿಮ್ಮಡ ಗ್ರಾಮದಲ್ಲಿ ಮೊಹರಂ ನಿಮಿತ್ತ ನಡೆದ ಡೋಲಿ ಮೆರವಣಿಗೆಯಲ್ಲಿ ಪಾಲ್ಗೊಂಡ ಜನಸ್ತೋಮ.
Published on

ಚಿಮ್ಮಡ: ತ್ಯಾಗ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಗ್ರಾಮದಲ್ಲಿ ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಗ್ರಾಮದ ಜಾಮಿಯಾ ಮಸೀದಿ ಹಾಗೂ ಗ್ರಾಮ ಚಾವಡಿ ಪಕ್ಕದ ಅಂಚೆ ಕಚೇರಿಯಲ್ಲಿ ಪ್ರತಿಸ್ಥಾಪಿಸಲಾಗಿದ್ದ ಲಾಲಸಾಬಲಿ ಹಾಗೂ ಹುಸೇನಬಾಷಾ ದೇವರಿಗೆ ಕಳೆದ ಐದು ದಿನಗಳಿಂದ ಪ್ರತಿನಿತ್ಯ ವಿಶೇಷ ಪೂಜೆ ನೆರವೇರಿಸಲಾಯಿತು.
ಸಾಥವಿ ಪೂಜೆ, ಗಂಧರಾತ್ರಿ ನಡೆಯುವ ವಿಶೇಷ ಪೂಜೆಗಳಲ್ಲಿ ಸರ್ವಧರ್ಮಿಯರು ಪಾಲ್ಗೊಂಡಿದ್ದರು. ಶುಕ್ರವಾರ ರಾತ್ರಿ ಕರ್ಬಲಾ ನಿಮಿತ್ತ ರಿವಾಯತ್ (ಮೊಹರಂ ಪದ) ಗಳ ಗೀತಗಾಯನ ನಡೆಯಿತು. ಹಬ್ಬದ ಕೊನೆಯ ದಿನ ಶನಿವಾರ ದೇವರನ್ನು ವಿಸರ್ಜಿಸಲು ಹೊಳೆಗೆ ಒಯ್ಯುವ ಮುಂಚೆ ನಡೆಯುವ ಡೋಲಿ ಉತ್ಸವದಲ್ಲಿ ಗ್ರಾಮಸ್ಥರು ದೇವರಿಗೆ ಬೆತ್ತಾಸು, ಖಾರಿಕ ಅರ್ಪಿಸಿ ಹರಕೆ ತೀರಿಸಿದರು. ವಿಶೇಷ ಸಿಹಿ ಖಾದ್ಯ ಚೊಂಗೆ ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿ ಅವುಗಳನ್ನು ಹಿಂದು ಬಾಂಧವರೊಂದಿಗೆ ಹಂಚಿಕೊಳ್ಳುವ ಮೂಲಕ ಭಾವೈಕ್ಯ ಮೆರೆದರು.
ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪ ಪೂಜಾರಿ, ಅಣ್ಣಪ್ಪಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಆನಂದ ಕವಟಿ, ಮಾಜಿ ಅಧ್ಯಕ್ಷ ಗುರುಲಿಂಗಪ್ಪ ಪೂಜಾರಿ, ಪರಪ್ಪ ಪಾಲಭಾವಿ, ಬೀರಪ್ಪ ಹಳೇಮನಿ, ದುಂಡಪ್ಪ ಪಾಟೀಲ, ಬಸಪ್ಪ ಪಾಟೀಲ, ರಾಚಯ್ಯ ಮಠಪತಿ, ಎಪಿಎಂಸಿ ನಿರ್ದೇಶಕ ಪ್ರಭು ಮುಧೋಳ, ಅಶೋಕ ಧಡೂತಿ, ಮನೋಜ ಹಟ್ಟಿ, ಪಿಕೆಪಿಎಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಬೀರಪ್ಪ ಗಡದಿ ಇತರರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಹರಕೆ ತೀರಿಸಿದರು. ಮುಸ್ಲಿಂ ಮುಖಂಡರಾದ ರುಸ್‌ತುಂ ಮಾಲದಾರ, ಹನೀಫ್ ಚಿಕ್ಕೋಡಿ, ಅಮೀರಲಿ ಸರಕಾವಸ ಸೇರಿದಂತೆ ಹಲವು ಇದ್ದರು.
ಪೊಲೀಸ್ ಸಿಬ್ಬಂದಿ ಪ್ರಶಾಂತ ಚಿಲ್ಲಾಪೂರ, ಬಸವರಾಜ ಹುನ್ನೂರ ಭದ್ರತೆ ಒದಗಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net