

ಆಲಮೇಲ: ಜಿಲ್ಲೆಯಲ್ಲಿ ಭಾವೈಕತೆಗೆ ಹೆಸರಾದ ಪಟ್ಟಣದಲ್ಲಿ ಹಿಂದುಗಳ ಹಬ್ಬಗಳಲ್ಲಿ ಮುಸ್ಲಿಮರು, ಮುಸ್ಲಿಮರ ಹಬ್ಬಗಳಲ್ಲಿ ಹಿಂದುಗಳು ಸೌಹಾರ್ಧದಿಂದ ಭಾಗಿಯಾಗಿ ಆಚರಣೆ ಮಾಡುತ್ತಿರುವುದು ಸಂತಸದ ವಿಷಯ. ಈ ಸಾರಿಯೂ ಗಣೇಶ ಹಬ್ಬವನ್ನು ಶಾಂತಿಯಿಂದ ಆಚರಿಸಿ ಎಂದು ಸಿಪಿಐ ಡಿ. ಹುಲುಗಪ್ಪ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲರೂ ಪ್ರತಿ ವರ್ಷದಂತೆ ಈ ವರ್ಷವೂ ಸರ್ಕಾರ ನಿಯಮದಂತೆ ಅನ್ಯ ಧರ್ಮಿಯರಿಗೆ ತೊಂದರೆಯಾಗದಂತೆ ಶಾಂತತೆಯಿಂದ ಹಬ್ಬವನ್ನು ಆಚರಿಸಬೇಕು. ಒಂದೊಮ್ಮೆ ಯಾರಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೃತ್ಯ ನಡೆಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಂದರು.
ಪಿಎಸ್‌ಐ ಕುಮಾರ ಹಾಡಕಾರ ಮಾತನಾಡಿ, ಗಣೇಶ ಪ್ರತಿಷ್ಠಾಪನೆ ಮಾಡಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ರಾತ್ರಿ ವೇಳೆ ಪೆಂಡಾಲ್‌ಗಳಲ್ಲಿ ದೀಪ ಇರುವ ಕಾರಣ ಅವುಗಳಿಗೆ ಧಕ್ಕೆಯಾಗದಂತೆ ರಾತ್ರಿ ವೇಳೆ ಎಚ್ಚರಿಕೆ ವಹಿಸಬೇಕು. ವೃದ್ಧರಿಗೆ, ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಹೆಚ್ಚಿನ ಧ್ವನಿಯುಳ್ಳ ಧ್ವನಿವರ್ಧಕ ಬಳಬಾರದು. ವಿದ್ಯುತ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಗಣೇಶ ಪ್ರತಿಷ್ಠಾಪಿಸುವ ಮಂಡಳಿಗಳು ಪರವಾನಿಗೆ ಪಡೆಯಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ರಸ್ತೆಯ ಬದಿಯಲ್ಲಿ ಗಣೇಶ ಪ್ರತಿಷ್ಠಾಪಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಬಿ.ಆರ್. ಯಂಟಮಾನ, ಗ್ರಾಪಂ ಮಾಜಿ ಅಧ್ಯಕ್ಷ ಅಯೂಬ ದೇವರಮನಿ, ಪಪಂ ಸದಸ್ಯ ಸಾಧೀಕ ಸುಂಬಡ, ತಾಪಂ ಮಾಜಿ ಸದಸ್ಯ ಶಿವಾನಂದ ಜಗತಿ ಮಾತನಾಡಿದರು.
ಪ್ರತಿವರ್ಷದಂತೆ ಈ ವರ್ಷವೂ ಗಜಾನನ ಮಹಾಮಂಡಳಿಯನ್ನು ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಮುಖದಲ್ಲಿ ರಚಿಸಲಾಯಿತು. ಮುಸ್ಲಿಂ ಸಮಾಜದ ಮುಖಂಡ ಮಹಿಬೂಬ ಮಸಳಿ ಇವರನ್ನು ಗಜಾನನ ಮಹಾಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಡಾ. ಸಂದೀಪ ಪಾಟೀಲ, ಅಪರಾಧ ವಿಭಾಗದ ಪಿಎಸ್‌ಐ ಎನ್.ಜಿ. ಅಪನಾಯ್ಕರ, ಉಪತಹಸೀಲ್ದಾರ್ ಜಿ.ಟಿ. ನಾಯಕ, ತಾಪಂ ಅಧಿಕಾರಿ ಸಿದ್ದು ಅಂಕಲಗಿ, ಶ್ರೀಶೈಲ ಮಠಪತಿ, ಸಿದ್ದರಾಮ ಕೊಳಾರಿ, ಉಮ್ಮರ ಬಿಳವಾರ, ಶ್ರೀಶೈಲ ಭೋವಿ, ಜೈಭೀಮ ನಾಯ್ಕೋಡಿ, ಶಶಿಧರ ಗಣಿಹಾರ, ಹರೀಶ ಯಂಟಮಾನ, ಫಾರೂಕ ಪಟೇಲ, ಆರ್.ಎನ್. ಪಾಟೀಲ, ಎಸ್.ಎಸ್. ಬಾಪಗೊಂಡ, ಎಸ್.ಕೆ. ವಾಘಮೊರೆ, ಸಿದ್ದು ದಿಂಡವಾರ ಇತರರಿದ್ದರು.