ಮೈಸೂರಿನಲ್ಲಿ ಸುಬ್ರಹ್ಮಣ್ಯ ಷಷ್ಠಿ ಸಂಭ್ರಮ

10
Published on

ಮೈಸೂರು: ಸುಬ್ರಹ್ಮಣ್ಯ ಷಷ್ಟಿ ಅಂಗವಾಗಿ ನಗರದ ವಿವಿಧ ದೇವಸ್ಥಾನಗಳಲ್ಲಿ ಸೋಮವಾರ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಬೆಳಗ್ಗೆಯಿಂದಲೇ ದೇವಸ್ಥಾನ, ಅರಳಿಕಟ್ಟೆಯಲ್ಲಿರುವ ನಾಗ ಪ್ರತಿಮೆಗಳಿಗೆ ಜನರು ಕ್ಷೀರಾಭಿಷೇಕ, ಪಳನಿ ಪಂಚಾಮೃತ ಅಭಿಷೇಕ, ಫಲಾಮೃತ, ಗಂಧಾಭಿಷೇಕ, ವಿಭೂತಿ, ಪುಷ್ಪಾಭಿಷೇಕ ಸೇರಿದಂತೆ ಇನ್ನಿತರ ಪೂಜಾ ಕಾರ್ಯ ನೆರವೇರಿಸಿದರು. ಬಳಿಕ ದೇವರ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ವಿಶ್ವೇಶ್ವರನಗರದ ಶ್ರೀಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ವಿದ್ಯಾರಣ್ಯಪುರಂನ ಬೂತಾಳೆ ಮೈದಾನ, ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಾಲಯ, ಕುರುಬಾರಹಳ್ಳಿ ಬನ್ನಿಮಹಾಕಾಳೇಶ್ವರಿ ದೇವಾಲಯ, ಅಗ್ರಹಾರ ಗಣಪತಿ ದೇವಾಲಯ, ಕೆ.ಜಿ.ಕೊಪ್ಪಲಿನ ಬಂದಂತಮ್ಮ ದೇವಾಲಯ, ಜಿಲ್ಲಾಧಿಕಾರಿ ಕಚೇರಿ ಸಮೀಪ ಕಾಡುಮಲ್ಲೇಶ್ವರ ದೇವಾಲಯ, ಯರಗನಹಳ್ಳಿ, ಸಿದ್ದಾರ್ಥಬಡಾವಣೆ, ಆಲನಹಳ್ಳಿ, ಸರಸ್ವತಿಪುರಂ, ಟಿ.ಕೆ.ಲೇಔಟ್, ಜನತಾನಗರ, ಬಿಸಿಲುಮಾರಮ್ಮ ದೇವಾಲಯ, ದಟ್ಟಗಳ್ಳಿ, ಬೋಗಾದಿ, ಮೇಟಗಳ್ಳಿ, ಕುಂಬಾರಕೊಪ್ಪಲು, ಕೆಸರೆ, ಜೆ.ಪಿ.ನಗರ, ರಮಾಬಾಯಿನಗರ, ಚಾಮುಂಡಿಪುರಂ, ಜೆಎಸ್‌ಎಸ್ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿಯೂ ಭಕ್ತರು ಹುತ್ತ ಹಾಗೂ ನಾಗರಕಲ್ಲಿಗೆ ಹಾಲೆರೆದು ಪೂಜೆ ಸಲ್ಲಿಸಿದರು. ಕೆಲವೆಡೆ ನೈವೇಧ್ಯಕ್ಕೆ ಮನೆಯಿಂದ ತಯಾರಿಸಿ ತಂದಿದ್ದ ತಿಂಡಿ, ಹಣ್ಣನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡುತ್ತಿದ್ದ ದೃಶ್ಯ ಕಂಡುಬಂತು.
ಷಷ್ಠಿ ಜಾತ್ರೆ ರದ್ದು:
ಪ್ರತಿವರ್ಷ ವೈಭವದಿಂದ ನಡೆಯುತ್ತಿದ್ದ ಸಿದ್ದಲಿಂಗಪುರದ ಷಷ್ಠಿ ಜಾತ್ರೆ ಈ ಬಾರಿ ನಡೆಯಲಿಲ್ಲ. ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಸಿದ್ದಲಿಂಗಪುರ ಗ್ರಾಮದ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದ ಮರುನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಜಾತ್ರೆಯನ್ನು ಈ ಬಾರಿ ರದ್ದು ಮಾಡಲಾಗಿತ್ತು. ಪ್ರತಿವರ್ಷ ವೈಭವದಿಂದ ನಡೆಯುತ್ತಿದ್ದ ಸುಬ್ರಮಣ್ಯ ಷಷ್ಠಿ ಜಾತ್ರೆಗೆ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದರು. ಆದರೆ ಈ ಬಾರಿ ದೇವಾಲಯದ ಮರು ನಿರ್ಮಾಣ ಕಾರ್ಯ ಹಿನ್ನೆಲೆಯಲ್ಲಿ ಷಷ್ಠಿ ಮಹೋತ್ಸವವನ್ನು ರದ್ದು ಮಾಡಿ ದೇವಸ್ಥಾನದ ಆವರಣದಲ್ಲೇ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು.
ಮುಂಜಾನೆಯೇ ಸುಬ್ರಹ್ಮಣ್ಯಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಸಾರ್ವಜನಿಕರಿಗೆ ಅವಕಾಶ ನಿರ್ಬಂಧಿಸಲಾಗಿತ್ತು. ಆದರೂ ಕೆಲವರು ದೇವಸ್ಥಾನ ಪಕ್ಕದ ಖಾಲಿ ಜಾಗದಲ್ಲಿ ಪೂಜೆ ಸಲ್ಲಿಸಿ ತೆರಳುತ್ತಿದ್ದ ದೃಶ್ಯ ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net