

ಉಡುಪಿ: ಸಾರ್ವಜನಿಕರ ಹಿತದೃಷ್ಟಿಯಿಂದ ಉಡುಪಿ ನಗರ, ಗ್ರಾಮೀಣ ಪ್ರದೇಶ ಹಾಗೂ ಗಡಿ ಭಾಗಗಳಲ್ಲಿ ಸಿಸಿಟಿವಿ ಅವಳಡಿಕೆಗೆ ಮುಂದಾಗಿರುವ ಪೊಲೀಸ್ ಇಲಾಖೆ ಕಾರ್ಯ ಶ್ಲಾಘನೀಯ. ಇದರಿಂದ ಜಿಲ್ಲೆಯಲ್ಲಿ ಅಹಿತಕರ ಘಟನೆಗಳನ್ನು ತಡೆಗಟ್ಟಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಸರ್ವೀಸ್ ಬಸ್ ನಿಲ್ದಾಣದಲ್ಲಿ ಚೇಂಬರ್ ಆಫ್ ಕಾಮರ್ಸ್ ಸಹಕಾರದೊಂದಿಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶ್ಯೇನ ದೃಷ್ಟಿ (ಸಿಸಿಟಿವಿ ಅಳವಡಿಕೆ) ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ 207 ಜಂಕ್ಷನ್ಗಳಲ್ಲಿ 621 ನೈಟ್ ವಿಸನ್ ಕ್ಯಾಮೆರಾಗಳು ಮತ್ತು 10 ಜಿಲ್ಲಾ ಗಡಿ ರಸ್ತೆಗಳಲ್ಲಿ 20 ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಯೋಜನೆಗೆ ಸುಮಾರು 2.50 ರಿಂದ 3 ಕೋಟಿ ರೂ. ವೆಚ್ಚವಾಗುತ್ತಿದೆ ಎಂದರು. ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪಾ, ಜಿಲ್ಲಾ ಪಂಚಾಯಿತಿ ಸಿಇಒ ಪ್ರತಿಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿ ರಾಮ್ ಶಂಕರ್ ಮೊದಲಾದವರು ಉಪಸ್ಥಿತರಿದ್ದರು.
ಗೃಹಲಕ್ಷ್ಮಿ ಯೋಜನೆ ಹಣ ಸಂದಾಯ
ಉಡುಪಿ: ಗೃಹಲಕ್ಷ್ಮಿ ಯೋಜನೆಯ ಜೂನ್ ಹಾಗೂ ಜುಲೈ ತಿಂಗಳ ಹಣ ಬಿಡುಗಡೆಯಾಗಿರಲಿಲ್ಲ.
ಈಗ ಆ ಹಣವನ್ನ ಬಿಡುಗಡೆ ಮಾಡಿ ಉಡುಪಿಗೆ ಬಂದಿದ್ದೇನೆ. ಹಣ ಬಿಡುಗಡೆಯಾಗಿ ಸರಿಸುಮಾರು ಐದು ಆರು ದಿನಗಳು ಕಳೆದಿವೆ. ಎಲ್ಲರಿಗೂ ಹಣ ತಲುಪಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ತಿಂಗಳಿನ ಬಾಕಿ ಹಣ ಸಂದಾಯವಾಗಿದೆ. ಮುಂದಿನ ಗಣೇಶ ಚತುರ್ಥಿಯ ಒಳಗೆ ಗೃಹಲಕ್ಷ್ಮಿ ಜುಲೈ ತಿಂಗಳ ಹಣ ಬಿಡುಗಡೆಯಾಗಲಿದೆ ಎಂದರು.
ಹೈಕಮಾಂಡ್ ತೀಮಾರ್ನಕ್ಕೆ ಬದ್ಧ
ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರನಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಮನವಿ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಅಧಿಕಾರವಿದೆ. ಆದರೆ ಹೈಕಮಾಂಡ್ ತೆಗೆದುಕೊಳ್ಳುವ ತೀಮಾರ್ನಗಳಿಗೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ. ಅದೇ ಅಂತಿಮ ಎಂದು ಹೇಳಿದರು.
ಕೋರ್ಟ್ ತೀರ್ಪಿಗೆ ತಲೆಬಾಗಬೇಕು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಏಳು ಸಹಚರರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ ಸಚಿವರು, ನ್ಯಾಯಾಲಯ ತೀರ್ಪು ಕೊಟ್ಟ ನಂತರ ನಾವೆಲ್ಲರೂ ಅದಕ್ಕೆ ತಲೆಬಾಗಲೇಬೇಕು. ಸಂವಿಧಾನದಲ್ಲಿ ವಿಶ್ವಾಸ ಇರಿಸಿಕೊಂಡಿರುವ ತೀರ್ಪಿಗೆ ಬದ್ಧ ಎಂದರು.