

ಬೆಂಗಳೂರು: ಗೃಹ ಬಳಕೆ ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ರೀಫಿಲ್ಲಿಂಗ್ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ಮಾಡಿರುವ ಸಿಸಿಬಿ ಪೊಲೀಸರು 2 ಲಕ್ಷ ರೂ.ಮೌಲ್ಯದ ವಿವಿಧ ಕಂಪನಿಗಳ 96 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಡಿವಾಳದ ಸುಭಾಷನಗರದ ವಿಆರ್‌ಎಂ ಎಂಟರ್ ಪ್ರೈಸಸ್ ಹೆಸರಿನ ಅಂಗಡಿ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ದಾಳಿ ಮಾಡಿದ್ದಾರೆ. ಅಂಗಡಿಯಲ್ಲಿ ಗೃಹ ಬಳಕೆ ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ರೀಫಿಲ್ಲಿಂಗ್ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ.
ದಾಳಿಯ ವೇಳೆ ಅಕ್ರಮವಾಗಿ ಸಂಗ್ರಹಿಸಿದ್ದ ಸರ್ಕಾರಿ ಸ್ವಾಮ್ಯದ ಭಾರತ್, ಇಂಡೇನ್ ಹಾಗೂ ಖಾಸಗಿ ಕಂಪನಿಗಳಾದ ಜ್ಯೋತಿ ಹಾಗೂ ಎಂವಿಆರ್ ಕಂಪನಿಗೆ ಸೇರಿದ 47 ದೊಡ್ಡ ಸಿಲಿಂಡರ್ ಹಾಗೂ 49 ಚಿಕ್ಕ ಸಿಲಿಂಡರ್ ಸೇರಿ ಒಟ್ಟು 96 ಸಿಲಿಂಡರ್ ಜಪ್ತಿ ಮಾಡಲಾಗಿದೆ. ಒಂದು ರಾಡ್, ಅಳತೆ ಯಂತ್ರವನ್ನೂ ಅಮಾನತುಪಡಿಸಲಾಗಿದೆ.
ಅಂಗಡಿಯ ಮಾಲೀಕ ಧನರಾಜ್ ಎಂಬಾತ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.