

ವಿಜಯವಾಣಿ ಸುದ್ದಿಜಾಲ ಬೆಳ್ವೆ
ಜನರ ಹಾಗೂ ಪೊಲೀಸ್ ಇಲಾಖೆ ನಡುವೆ ಮೂಡುವ ಉತ್ತಮ ಸಂಬಂಧಗಳಿಂದ ಅಪರಾಧ ಪ್ರಕರಣಗಳ ತಡೆಗೆ ಸಹಕಾರಿಯಾಗಲಿವೆ. ಅಲ್ಬಾಡಿ ಸರ್ಕಲ್ನಲ್ಲಿ ಸ್ಥಳೀಯರು ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಜಯರಾಮ ಗೌಡ ಹೇಳಿದರು.
ಅಲ್ಬಾಡಿ ಮೂರುಕೈಯಲ್ಲಿ ದಾನಿಗಳು ಹಾಗೂ ಸ್ಥಳೀಯರ ಸಹಕಾರದಲ್ಲಿ ಅಳವಡಿಸಿದ ಸಿಸಿ ಕ್ಯಾಮರಾಗಳನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಶಂಕರನಾರಾಯಣ ಪೊಲೀಸ್ ಠಾಣೆ ಉಪನೀರಿಕ್ಷಕ ನಾಸೀರ್ ಹುಸೇನ್ ಮಾತನಾಡಿ, ಶಂಕರನಾರಾಯಣ, ಹೆಬ್ರಿ, ಅಮಾಸೆಬೈಲು ಭಾಗದ ಜನರು ಪೊಲೀಸ್ ಇಲಾಖೆ ಜತೆ ಉತ್ತಮ ಸಂಬಂಧ ಹೊಂದಿದ್ದಾರೆ. ಇದರಿಂದ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದರು.
ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ, ಉಪಾಧ್ಯಕ್ಷೆ ಪುಷ್ಪಾ, ಸದಸ್ಯ ಕರುಣಾಕರ ಶೆಟ್ಟಿ ಅಲ್ಬಾಡಿ, ಸಿಸಿ ಕ್ಯಾಮರಾಗಳ ಅಳವಡಿಕೆಗೆ ಕೊಡುಗೆ ನೀಡಿದ ಬೆಳ್ವೆ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಚಂದ್ರಶೇಖರ್ ಶೆಟ್ಟಿ ಸುರ್ಗೋಳಿ, ಲೋಕೋಪಯೋಗಿ ಇಲಾಖೆ ಕುಂದಾಪುರ ವಿಭಾಗದ ಅಭಿಯಂತ ಮಹಾಬಲ ನಾಯ್ಕ ಅಲ್ಬಾಡಿ ಉಪಸ್ಥಿತರಿದ್ದರು. ಸುದೀಪ್ ಶೆಟ್ಟಿ ಅಲ್ಬಾಡಿ ಸ್ವಾಗತಿಸಿದರು. ಪ್ರಶಾಂತ ಗುಮ್ಮೋಲ ನಿರೂಪಿಸಿದರು.