ಕಾವೇರಿ ನದಿ ನೀರು ಹಂಚಿಕೆ ವಿವಾದ: ಪ್ರತ್ಯೇಕ ಪೀಠ ರಚನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

Supremecourt
Published on

ನವದೆಹಲಿ:  ಕರ್ನಾಟಕ, ತಮಿಳುನಾಡಿನ ನಡುವೆ ತಿಕ್ಕಾಟಕ್ಕೆ ಕಾರಣವಾಗಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಪ್ರತ್ಯೇಕ ಪೀಠ ರಚನೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.

ಸುಪ್ರೀಂಕೋರ್ಟ್​ನಲ್ಲಿ ಸಿಜೆಐ ಪೀಠದ ಮುಂದೆ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿದ್ದು, ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅರ್ಜಿ ಪ್ರಸ್ತಾಪಿಸಿದ್ದಾರೆ. ಪ್ರತಿದಿನ 24,000 ಕ್ಯೂಸೆಕ್ ಕಾವೇರಿ ನೀರು ಬಿಡಬೇಕು. ಈ ಕುರಿತು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಈ ವಿಷಯವನ್ನು ಹಿರಿಯ ವಕೀಲ ಮುಕುಲ್ ರೋಹಟಗಿ ಪ್ರಸ್ತಾಪಿಸಿದರು.

ಈ ಹಿನ್ನೆಲೆ ಕರ್ನಾಟಕ-ತಮಿಳುನಾಡು ನಡುವೆ ಕಾವೇರಿ ನದಿ ನೀರು ವಿವಾದದ ಪ್ರಕರಣ ಬಗೆ ಹರಿಸುವ ಸಲುವಾಗಿ ಪ್ರತ್ಯೇಕ ಪೀಠ ರಚಿಸಿ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ.

ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಹೊಸ ನಿರ್ದೇಶನಗಳನ್ನು ನೀಡಬೇಕೆಂದು ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿವಾದದ ವಿಚಾರಣೆಗೆ ಪ್ರತ್ಯೇಕ ಪೀಠವನ್ನು ರಚಿಸಲು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಒಪ್ಪಿಗೆ ನೀಡಿದ್ದಾರೆ. ಇಂದೇ ಈ ಪೀಠ ರಚನೆಯಾಗಲಿದ್ದು, ವಿಚಾರಣೆ ಕೂಡ ಇಂದೇ ಆರಂಭವಾಗಲಿದೆ ಎಂದು ಹೇಳಲಾಗಿದೆ.

ಇತ್ತ ಕಾವೇರಿ ಪ್ರಾಧಿಕಾರ ತಮಿಳುನಾಡಿಗೆ ದಿನಕ್ಕೆ 10,000 ಕ್ಯೂಸೆಕ್ ನೀರು ಬಿಡಲು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆ ಇಂದು ಕರ್ನಾಟಕದಿಂದಲೂ ಮೇಲ್ಮನವಿ ಸಲ್ಲಿಕೆ ಆಗಿದೆ.  ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಡ್ಯಾಂಗಳಲ್ಲಿ ನೀರಿನ ಕೊರತೆ ಬಗ್ಗೆ ಕರ್ನಾಟಕ ಪರ ವಕೀಲ ಶ್ಯಾಮ್ ದಿವಾನ್​​ ವಾದ ಮಂಡಿಸಲಿದ್ದಾರೆ.

ತಮಿಳುನಾಡಿಗೆ ನೀರು ಬಿಡಬಾರದು, ರಾಜ್ಯದಲ್ಲಿ ಬೇಸಿಗೆ ಕಾಲದಲ್ಲಿ ನೀರಿಗೆ ಸಮಸ್ಯೆ ಉಂಟಾಗಬಹುದು ಎಂದು ಕಾವೇರಿ ನದಿ ಪಾತ್ರದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net