

ಕ್ಯಾಲಿಫೋರ್ನಿಯಾ: ಮುಳುಗುವವನಿಗೆ ಹುಲ್ಲು ಕಡ್ಡಿಯೇ ಆಸರೆ ಎನ್ನುತ್ತಾರೆ. ಅದೇ ರೀತಿ ಇಲ್ಲೊಬ್ಬ ಮುಳುಗುತ್ತಿದ್ದ ಯುವಕನಿಗೆ ಕಡ್ಡಿಯೇ ಆಸರೆಯಾಗಿ ಪುನರ್ಜನ್ಮ ಪಡೆದಿದ್ದಾನೆ!
ಇದು ನಡೆದಿರುವುದು ಕ್ಯಾಲಿಫೋರ್ನಿಯಾದಲ್ಲಿ. 24 ವರ್ಷದ ಯುವಕ ಇಲ್ಲಿಯ ಏಂಜೆಲ್ ನದಿಯನ್ನು ದಾಟಲು ಹೋದಾಗ ಅಚಾನಕ್ ಆಗಿ ಸುಳಿಗೆ ಸಿಲುಕಿಬಿಟ್ಟಿದ್ದಾನೆ. ಇನ್ನೇನು ಆತ ಮುಳುಗಲು ಕೆಲವೇ ಕ್ಷಣಗಳು ಬಾಕಿ ಇದ್ದವು. ಈಜಲು ಬಾರದ ಆತ ಸುಳಿಯ ಒಳಗಿನಿಂದಲೇ ಬೊಬ್ಬೆ ಹಾಕಿದ್ದಾನೆ.
ಈತನ ಅದೃಷ್ಟವೋ ಎಂಬಂತೆ ಅಲ್ಲಿಯೇ ಸಮೀಪ ಗಸ್ತು ದಳದ ಅಧಿಕಾರಿಯೊಬ್ಬರು ಗಸ್ತು ತಿರುಗುತ್ತಿದ್ದರು. ಈತನ ಕೂಗು ಅವರಿಗೆ ಕೇಳಿಸಿದೆ. ತತ್ಕ್ಷಣ ಸ್ಥಳಕ್ಕೆ ಆಗಮಿಸಿದ್ದು ಯುವಕನನ್ನು ಬಚಾವ್ ಮಾಡಿದ್ದಾರೆ. ಇದರ ವಿಡಿಯೋ ಈಗ ಭಾರಿ ವೈರಲ್ ಆಗಿದ್ದು, ಮರುಜನ್ಮ ಪಡೆದ ಯುವಕನಿಗೆ ಅಭಿನಂದನೆ ಸಲ್ಲಿಸಿದ್ದಾನೆ.
ಅಷ್ಟಕ್ಕೂ ಗಸ್ತು ಅಧಿಕಾರಿ ಯುವಕನನ್ನು ಬಚಾವು ಮಾಡಿರುವುದೋ ಸೋಜಿಗ. ಯುವಕ ಕೂಗಿಕೊಂಡಾಗ ಸ್ಥಳಕ್ಕೆ ಧಾವಿಸಿದ್ದರೂ ಸುಳಿಯಲ್ಲಿ ಯಾರೂ ಕೆಳಗೆ ಇಳಿಯುವ ಸಾಹಸ ಮಾಡುವಂತಿರಲಿಲ್ಲ. ಈಜು ಬಂದವರು ಕೂಡ ಇಲ್ಲಿ ಇಳಿದರೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇತ್ತು. ಆದ್ದರಿಂದ ಗಸ್ತು ಅಧಿಕಾರಿಗಳು ಅತ್ತಿತ್ತ ನೋಡಿದಾಗ ಅವರಿಗೆ ಒಂದು ಕೋಲು ಸಿಕ್ಕಿದೆ. ಅದರ ಜತೆ ಬಳ್ಳಿಯೂ ಸಿಕ್ಕಿದೆ.
ಸಮಯಪ್ರಜ್ಞೆ ಮೆರೆದ ಅಧಿಕಾರಿ ಬಡಿಗೆ ಹಾಗೂ ಬಳ್ಳಿಯನ್ನು ಸೇರಿಸಿ ಯುವಕನತ್ತೆ ಎಸೆದಿದ್ದಾನೆ. ಇನ್ನೇನು ತನ್ನ ಕಥೆ ಮುಗಿದೇ ಹೋಯ್ತು ಎನ್ನುತ್ತಿದ್ದ ಯುವ ಸಿಕ್ಕ ಕೋಲಿನ ಸಹಾಯ ಪಡೆದು ದಡ ಸೇರಿದ್ದಾನೆ.
ಇಷ್ಟೊತ್ತಿಗೆ ಅಲ್ಲಿಗೆ ಜಮಾಯಿಸಿದ್ದ ಸ್ಥಳೀಯರು ಇದರ ವೀಡಿಯೋ ಮಾಡಿ ಫೇಸ್ ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಈ ವೀಡಿಯೋವನ್ನು 1.4 ಲಕ್ಷ ಮಂದಿ ವೀಕ್ಷಿಸಿದ್ದಲ್ಲದೆ, ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಸಮಯಪ್ರಜ್ಞೆ ಮೆರೆದ ಅಧಿಕಾರಿಯನ್ನು ಹಾಡಿ ಹೊಗಳಿಸಿದ್ದಾರೆ. (ಏಜೆನ್ಸೀಸ್)