ಹಂಪಿ ಉತ್ಸವದಲ್ಲಿ ನೂರು ಕಲಾವಿದರಿಂದ ಮಹಾ ಸಾಮ್ರಾಜ್ಯದ ಮರುಸೃಷ್ಟಿ

ಧ್ವನಿ-ಬೆಳಕು ಕಾರ್ಯಕ್ರಮವನ್ನು ಮೈಸೂರಿನ ನೃತ್ಯ ಸಂಯೋಜಕಿ ಡಾ.ಶೀಲಾ ಶ್ರೀಧರ ಉದ್ಘಾಟಿಸಿದರು. ನವದೆಹಲಿ ಸಿಬಿಸಿ ಉಪನಿರ್ದೇಶಕ ಡಾ. ಸಂತೋಷ ಆಶಿಶ್, ಕೊಪ್ಪಳ ಡಯೇಟ್ ಹಿರಿಯ ಉಪನ್ಯಾಸಕ ಎಲ್. ಡಿ.ಜೋಷಿ, ಬೆಂಗಳೂರಿನ ಸಿಬಿಸಿ ನಿರ್ದೇಶಕ ಜಿ.ಜಯಕುಮಾರ, ಸಹಾಯಕ ವಿ.ಗಂಗಾಧರ ಇದ್ದರು. ಧ್ವನಿ-ಬೆಳಕು ಕಾರ್ಯಕ್ರಮದಲ್ಲಿ ಇತಿಹಾಸ ಬಿಂಬಿಸಿದ ಕಲಾವಿದರು.
ಧ್ವನಿ-ಬೆಳಕು ಕಾರ್ಯಕ್ರಮವನ್ನು ಮೈಸೂರಿನ ನೃತ್ಯ ಸಂಯೋಜಕಿ ಡಾ.ಶೀಲಾ ಶ್ರೀಧರ ಉದ್ಘಾಟಿಸಿದರು. ನವದೆಹಲಿ ಸಿಬಿಸಿ ಉಪನಿರ್ದೇಶಕ ಡಾ. ಸಂತೋಷ ಆಶಿಶ್, ಕೊಪ್ಪಳ ಡಯೇಟ್ ಹಿರಿಯ ಉಪನ್ಯಾಸಕ ಎಲ್. ಡಿ.ಜೋಷಿ, ಬೆಂಗಳೂರಿನ ಸಿಬಿಸಿ ನಿರ್ದೇಶಕ ಜಿ.ಜಯಕುಮಾರ, ಸಹಾಯಕ ವಿ.ಗಂಗಾಧರ ಇದ್ದರು. ಧ್ವನಿ-ಬೆಳಕು ಕಾರ್ಯಕ್ರಮದಲ್ಲಿ ಇತಿಹಾಸ ಬಿಂಬಿಸಿದ ಕಲಾವಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ಮಾರಕಗಳ ಸಂರಕ್ಷಣೆಗೆ ಧ್ವನಿ-ಬೆಳಕು ಪ್ರೇರಣೆ
  • ದೃಶ್ಯ ವೈಭವಕ್ಕೆ ದೇಶ-ವಿದೇಶಿ ಪ್ರವಾಸಿಗರು ಫಿದಾ
ರವೀಂದ್ರ ರಡ್ಡಿ ಹಂಪಿ
ಬಹಳಷ್ಟು ಜನರಿಗೆ ಹಂಪಿಯ ಇತಿಹಾಸವನ್ನು ಅರಿಯುವ ಕುತೂಹಲ ಹೆಚ್ಚಿರುತ್ತದೆ. ಆದರೆ ದಪ್ಪನೆಯ ಪುಸ್ತಕಗಳನ್ನು ಓದುವುದು ಅಥವಾ ವಿದ್ವಾಂಸರ ವಿದ್ವತ್ ಪೂರಿತ ಭಾಷಣಗಳನ್ನು ಕೇಳುವುದು ಹಲವರಿಗೆ ವ್ಯರ್ಜ್ಯವೆನಿಸುತ್ತದೆ. ಇಂತಹ ಇತಿಹಾಸವನ್ನು ಒಂದು ಸಿನಿಮಾದಂತೆ ಕೆಲವೇ ಗಂಟೆಗಳಲ್ಲಿ ಕಣ್ಣೆದುರು ದೃಶ್ಯ ರೂಪದಲ್ಲಿ ತೋರಿಸಿದರೆ ಹೇಗಿರುತ್ತದೆ ? ಖಂಡಿತವಾಗಿಯೂ ಅದು ಅದ್ಭುತ ಅಥವಾ ಸೂಪರ್ ಅಲ್ವಾ ?
ಹೌದು, ವಿಜಯನಗರದ ಗತ ವೈಭವವನ್ನು ಕಣ್ಮನ ತುಂಬಿಕೊಳ್ಳಬೇಕೆಂದರೆ ಹಕ್ಕ-ಬುಕ್ಕ ವೇದಿಕೆಯಲ್ಲಿ ಪ್ರದರ್ಶನಗೊಳ್ಳುವ ಧ್ವನಿ-ಬೆಳಕು ಕಾರ್ಯಕ್ರಮವನ್ನು ಪ್ರತಿಯೊಬ್ಬರೂ ತಪ್ಪದೆ ನೋಡಬೇಕು. ಹಂಪಿಯ ಆನೆಲಾಯ ಅಥವಾ ಕಮಲ್ ಮಹಲ್‌ನಂತಹ ಬೃಹತ್ ಸ್ಮಾರಕಗಳ ಮೇಲೆ ಬೀಳುವ ಬೆಳಕಿನ ಆಟ ಮತ್ತು ಹಿನ್ನೆಲೆಯಲ್ಲಿ ಕೇಳಿಬರುವ ಗಂಭೀರ ಧ್ವನಿಯು ಕೇಳುಗರ ಹಾಗೂ ನೋಡುಗರ ಮೈ ಪುಳಕಿಸುವ ಜತೆಗೆ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ. ಹಂಪಿಯ ಅವಶೇಷಗಳು ಹಾಗೂ ಆನೆ ಸಾಲು ಸಮುಚ್ಚಯ ಸೇರಿದಂತೆ 10ಕ್ಕೂ ಅಧಿಕ ರಂಗ ವೇದಿಕೆಗಳಲ್ಲಿ ವಿಜಯನಗರ ಸಾಮ್ರಾಜ್ಯ ಸಾಗಿಬಂದ ಸುದೀರ್ಘ ಇತಿಹಾಸ ಇಲ್ಲಿ ಅನಾವರಣಗೊಂಡಿತು.

ದೃಶ್ಯ ವೈಭವ-ಕಲಾ ಪ್ರದರ್ಶನ

ಆಕರ್ಷಕ ನೃತ್ಯ, ರೋಮಾಂಚನಕಾರಿ ಯುದ್ಧ ಸನ್ನಿವೇಶಗಳು, ಇಂಪಾದ ಸಂಗೀತ, ಬಗೆ ಬಗೆಯ ಬಣ್ಣದ ಉಡುಗೆ ತೊಡುಗೆಗಳು, ಮುದ ನೀಡುವ ಸಾಹಿತ್ಯ ಹಾಗೂ ಕಣ್ಣು ಕೋರೈಸುವ ಬೆಳಕಿನ ಸಮ್ಮಿಶ್ರಣವು ಕ್ಷಣ ಕಾಲ ಜನರನ್ನು ಶ್ರೀಮಂತ ಸಾಮ್ರಾಜ್ಯಕ್ಕೆ ಕರೆದೊಯ್ಯಿತು. 
ಗಂಭೀರ ವಿಷಯಗಳು, ಸಾಹಿತ್ಯ, ಯುದ್ಧ, ರಾಜನ ವೈಭವ, ಕುಟಿಲ ನೀತಿಗಳು, ಧರ್ಮ ರಕ್ಷಣೆ ಹಾಗೂ ಸಾಮ್ರಾಜ್ಯದ ಅವನತಿಯು ನವರಸಗಳ ಮೂಲಕ ಅಭಿವ್ಯಕ್ತಿಗೊಂಡ ಈ ಕಾರ್ಯಕ್ರಮವು ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿತು. ಸುಮಾರು 110 ಸ್ಥಳೀಯ ಕಲಾವಿದರು ಹಾಗೂ ಬೆಂಗಳೂರು, ದೆಹಲಿ, ಪುಣೆ ಸೇರಿದಂತೆ ವಿವಿಧ ತಂಡಗಳ ಕಲಾವಿದರು ವಿಜಯನಗರ ಮೆರೆದ ಬಗೆಯನ್ನು ಮರು ಸೃಷ್ಟಿಸಿದರು. ಇದರಲ್ಲಿ ಭಾರತೀಯ ಶಾಸ್ತ್ರೀಯ ಭರತ ನಾಟ್ಯ ಪ್ರಮುಖ ಆಕರ್ಷಣೆಯಾಯಿತು.

ಸ್ಮಾರಕಗಳಿಗೆ ಲಭಿಸಿದ ಜೀವಕಳೆ

ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಕೇವಲ ಒಂದು ಮನರಂಜನಾ ಪ್ರದರ್ಶನವಲ್ಲ. ಇದು ಶತಮಾನಗಳ ಹಿಂದೆ ವೈಭವದಿಂದ ಆಳಿದ ವಿಜಯನಗರ ಸಾಮ್ರಾಜ್ಯದ ಅರಸರ ಶೌರ್ಯ, ಪರಾಕ್ರಮ ಹಾಗೂ ಸಾಮ್ರಾಜ್ಯದ ಏಳು-ಬೀಳುಗಳನ್ನು ಜನಸಾಮಾನ್ಯರಿಗೆ ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸುವ ಕಾರ್ಯಕ್ರಮವಾಗಿ ಪ್ರತಿ ವರ್ಷ ಮೂಡಿಬರುತ್ತಿದೆ. ನಿರ್ಜೀವವಾಗಿ ನಿಂತಿರುವ ಕಲ್ಲಿನ ಸ್ಮಾರಕಗಳಿಗೆ ಅತ್ಯಾಧುನಿಕ ಬೆಳಕಿನ ವಿನ್ಯಾಸ ಮತ್ತು ಧ್ವನಿ ಮುದ್ರಿಕೆಗಳನ್ನು ಅಳವಡಿಸುವ ಮೂಲಕ ಸ್ಮಾರಕಗಳಿಗೆ ಜೀವ ತುಂಬಲಾಗಿದ್ದು, 
ಇದು ನೋಡುಗರ ಮೈ ನವಿರೇಳಿಸುತ್ತಿದೆ. ಇದರಿಂದ ಯುವ ಪೀಳಿಗೆಗೆ ನಮ್ಮ ನಾಡಿನ ವೀರ ಪರಂಪರೆ, ಕಲೆ ಮತ್ತು ವಾಸ್ತುಶಿಲ್ಪದ ಬಗೆಗಿನ ಗೌರವ ಹಾಗೂ ಹಿರಿಮೆ ಹೆಚ್ಚಿಸುವುದರ ಜತೆಗೆ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಸ್ಮಾರಕಗಳ ಪ್ರಾಮುಖ್ಯತೆಯನ್ನು ಸಾರುತ್ತಿದೆ. ಜನರು ಈ ಐತಿಹಾಸಿಕ ತಾಣಗಳನ್ನು ಗೌರವಿಸಲು ಮತ್ತು ಸಂರಕ್ಷಿಸಲು ಪ್ರೇರಿತರಾಗಲು ಈ ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಸಾಕ್ಷಿಯಾಯಿತು.

ಪ್ರವಾಸೋದ್ಯಮಕ್ಕೆ ಹೊಸ ಆಯಾಮ

ವಿಜಯನಗರ ಸಾಮ್ರಾಜ್ಯದ ಬಗ್ಗೆ ಪುಸ್ತಕಗಳಲ್ಲಿ ಓದಿ ತಿಳಿದುಕೊಳ್ಳುವುದಕ್ಕಿಂತ, ಕಣ್ಣೆದುರು ದೃಶ್ಯ ರೂಪದಲ್ಲಿ ಕಾಣುವ ಇತಿಹಾಸವು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಿಜಯನಗರ ಸಾಮ್ರಾಜ್ಯದ ವೈಭವ ಮತ್ತು ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಲು ಸಹಕಾರಿಯಾಗಲಿದೆ. ಇದು ಹಂಪಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಿ, ದೇಶ-ವಿದೇಶದ ಪ್ರವಾಸಿಗರನ್ನು ರಾತ್ರಿಯ ಸಮಯದಲ್ಲೂ ಹಂಪಿಯ ಸೌಂದರ್ಯ ಸವಿಯುವಂತೆ ಮಾಡುತ್ತಿದೆ. ಈ ವಿಶೇಷ ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಫೆಬ್ರವರಿ 19ರವರೆಗೆ ಹಂಪಿಯ ಗಜಶಾಲೆ ಆವರಣದಲ್ಲಿ ಪ್ರದರ್ಶನಗೊಳ್ಳಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net